ರೋಣ: ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿ 6 ತಿಂಗಳ ಗರ್ಭಿಣಿಯಾಗಿ, ಅನೇಕ ತೊಂದರೆ ಅನುಭವಿಸಿದ ತಾಲೂಕಿನ ಅರಹುಣಸಿ ಗ್ರಾಮದ ಬುದ್ಧಿಮಾಂದ್ಯೆ ಯುವತಿಗೆ ವಾರದ ಹಿಂದೆ ಗರ್ಭಪಾತ (ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ-ಎಂಟಿಪಿ) ಮಾಡಿಸಲಾಗಿದೆ.
ಗರ್ಭಪಾತಕ್ಕೆ ಕಾನೂನುಬದ್ಧ ಅನುಮತಿ ಸಿಕ್ಕರೂ 24 ವಾರಕ್ಕೂ ಹೆಚ್ಚು ದಿನವಾಗಿದ್ದರಿಂದ ಗರ್ಭಪಾತ ಕಷ್ಟವಾಗಿದ್ದರಿಂದ ಸಾಮಾನ್ಯ ಪ್ರಸವ ಪ್ರಕ್ರಿಯೆ ಮೂಲಕ ಡಿಲೆವರಿ ಮಾಡಲಾಯಿತು. 3 ದಿನ ಬದುಕುಳಿದ ಮಗು ಚಿಕಿತ್ಸೆ ಫಲಿಸದೇ ಅಸುನೀಗಿತು ಎಂದು ತಿಳಿದು ಬಂದಿದೆ.
ಅತ್ಯಾಚಾರಕ್ಕೊಳಗಾಗಿ 6 ತಿಂಗಳ ಗರ್ಭಿಣಿಯಾಗಿದ್ದ ಯುವತಿಯನ್ನು ಜಿಲ್ಲಾ ಸಿಡಿಪಿಒ ಇಲಾಖೆ, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಎಂಟಿಪಿ ಮಾಡಿಸಲಾಯಿತು. ಪ್ರಸವ ಪ್ರಕ್ರಿಯೆ ಮುಗಿದ ಬಳಿಕ ನಾಲ್ಕು ದಿನ ಆಸ್ಪತ್ರೆಯಲ್ಲಿ ಇಟ್ಟುಕೊಂಡು, ಅರಹುಣಸಿಗೆ ಕಳುಹಿಸಲಾಗಿದೆ.ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಯುವತಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಬಡತನದಿಂದ ಪೌಷ್ಟಿಕ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಅಂಗನವಾಡಿಯಿಂದ ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರವೂ ಈ ಯುವರಿಗೆ ಸಿಗುತ್ತಿಲ್ಲ. ಈ ಆಹಾರ ವಿತರಣೆ ಮಾಡದಿರುವುದಕ್ಕೆ ಸಿಡಿಪಿಒ ಇಲಾಖೆ ತಾಂತ್ರಿಕ ಸಮಸ್ಯೆ ಮುಂದಿಟ್ಟಿದೆ. ಹಾಗಾಗಿ ಅರೆಬರೆ ಬೆಂದಿರುವ ತಂಗಳು ಅನ್ನ, ಕಡಕ್ ರೊಟ್ಟಿ, ಮೆಣಸಿನಕಾಯಿ ಹಿಂಡಿಕಾರವೇ ಯುವತಿಯ ಆಹಾರವಾಗಿದೆ.
ಕಿತ್ತು ತಿನ್ನುವ ಬಡತನ ಮಧ್ಯೆ ತನ್ನ ಮಗಳಿಗಾದ ದೌರ್ಜನ್ಯದಿಂದ ಜರ್ಝರಿತಳಾದ ತಾಯಿಗೆ ಮಗಳನ್ನು ಆಸ್ಪತ್ರೆಗೆ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬರಲು ಕೈಯಲ್ಲಿ ಬಿಡಿಗಾಸು ಇಲ್ಲ. ಅವರಿವರ ಬಳಿ ಸಾಲ ಮಾಡಿ, ಹಣ ಹೊಂದಿಸಿಕೊಂಡು ತಿಂಗಳುಗಳ ಕಾಲ ಉದ್ಯೋಗ ಬಿಟ್ಟು ಮಗಳಿಗಾಗಿ ಆಸ್ಪತ್ರೆ, ಪೊಲೀಸ್ ಠಾಣೆ ಅಲೆಯುತ್ತಿದ್ದಾಳೆ.
ಪ್ರತಿಭಟನೆ ನಡೆಸುತ್ತೇವೆ: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ಅತ್ಯಂತ ಹೇಯ ಕೃತ್ಯ. ಬಂಧಿತ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಯುವತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಪರಿಹಾರಧನ ವಿತರಿಸಬೇಕು. ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ ವಿತರಿಸಬೇಕು. ಇಲ್ಲವಾದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸಿಡಿಪಿಒ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ ಎನ್. ಮೂರ್ತಿ ಬಣ)ದ ಜಿಲ್ಲಾಧ್ಯಕ್ಷ ದುರ್ಗಪ್ಪ ಕಟ್ಟಿಮನಿ ಹೇಳಿದರು. ತಾಂತ್ರಿಕ ಸಮಸ್ಯೆ: ಕೋರ್ಟ್ ಮತ್ತು ಮೆಡಿಕಲ್ ಬೋರ್ಡ್‌ನಿಂದ ಪರ್ಮಿಶನ್ ಪಡೆದು ಬುದ್ಧಿಮಾಂದ್ಯ ಯುವತಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಎಂಟಿಪಿ ಮಾಡಿಸಲಾಗಿದೆ. ಯುವತಿಯನ್ನು ಆಸ್ಪತ್ರೆಯಿಂದ ಡಿಸಾರ್ಜ್ ಮಾಡಲಾಗಿದೆ. ಬಾಣಂತಿಯರಿಗೆ ವಿತರಿಸಿದಂತೆ ಪೌಷ್ಟಿಕಾಂಶ ಆಹಾರ ವಿತರಿಸಲು ತಾಯಿ ಕಾರ್ಡ್ ಬೇಕಿದೆ. ಪೋಷಣ್ ಟ್ರ್ಯಾಕ್‌ನಲ್ಲಿ ತಾಯಿ ಕಾರ್ಡ್ ನೋಂದಣಿ ಮಾಡಬೇಕಿದೆ. ಆದರೆ ತಾಯಿ ಕಾರ್ಡ್ ಇಲ್ಲದೆ ಪೌಷ್ಟಿಕ ಆಹಾರ ವಿತರಿಸಲು ತಾಂತ್ರಿಕ ಸಮಸ್ಯೆ ಎದುರಾಗುವುದು. ಆದರೂ ಮಾನವೀಯತೆಯಿಂದ ಯುವತಿಗೆ ಪೌಷ್ಟಿಕ ಆಹಾರ ವಿತರಿಸಲು ರೋಣ ಸಿಡಿಪಿಒ ಮತ್ತು ಅರಹುಣಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸುತ್ತೇನೆ ಎಂದು ಗದಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಧಾ ಮಣ್ಣೂರ ಹೇಳಿದರು.