ಬಾಲ್ಯದಲ್ಲೇ ಸಂಸ್ಕಾರಯುತ ಶಿಕ್ಷಣ ನೀಡುವುದು ಅಗತ್ಯ

KannadaprabhaNewsNetwork |  
Published : Nov 16, 2026, 02:00 AM IST
ಬಾಟಂ | Kannada Prabha

ಸಾರಾಂಶ

It is essential to provide value-based education during childhood.

-ಸೀಮಾ ಮಾತಾಜೀ ಅಭಿಮತ । ಜ್ಞಾನ ಸೌರಭ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ, ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳ ಪ್ರಾರಂಭಿಕ ಶಿಕ್ಷಣದಲ್ಲಿ ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯ ಹಾಗೂ ಉತ್ತಮ ಗುಣಗಳನ್ನು ಕಲಿಸುವುದು ಅತ್ಯಂತ ಪ್ರಮುಖವಾಗಿದೆ. ಇಂದಿನ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಅಗತ್ಯವಾದ ಮೌಲ್ಯಯುತ ಶಿಕ್ಷಣ ನೀಡಲು ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಜ್ಞಾನ ಸೌರಭ ಶಿಕ್ಷಣ ಸಂಸ್ಥೆಯ ಗ್ರೀಷ್ಮ ಡೇ ಕೇರ್ ಸೆಂಟರ್ ಮುಖ್ಯಸ್ಥೆ ಸೀಮಾ ಮಾತಾಜೀ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಲೇಔಟ್‌ನಲ್ಲಿರುವ ಜ್ಞಾನ ಸೌರಭ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣದತ್ತ ಸಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಉತ್ತಮ ಅಂಕಗಳು, ಉನ್ನತ ಉದ್ಯೋಗ ಹಾಗೂ ಆರ್ಥಿಕವಾಗಿ ಉತ್ತಮ ಜೀವನ ನಡೆಸಲು ಬೇಕಾದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಜೀವನದಲ್ಲಿ ಅತ್ಯಂತ ಅಗತ್ಯವಾಗಿರುವ ಸಂಬಂಧಗಳ ಮೌಲ್ಯ, ಹಿರಿಯರಿಗೆ ಗೌರವ ನೀಡುವುದು, ಕಿರಿಯರನ್ನು ಪ್ರೀತಿಯಿಂದ ಕಾಣುವುದು, ಪರಸ್ಪರ ಸಹಕಾರ, ಮಾನವೀಯತೆ, ಶಿಸ್ತು ಹಾಗೂ ಸಂಸ್ಕಾರಗಳಂತಹ ಗುಣಗಳನ್ನು ಬೆಳೆಸುವ ಕಡೆಗೆ ನಿರೀಕ್ಷಿತ ಪ್ರಮಾಣದಲ್ಲಿ ಗಮನಹರಿಸಲಾಗುತ್ತಿಲ್ಲ ಎಂದರು.

ಶಿಕ್ಷಣವೆಂದರೆ ಕೇವಲ ಓದು, ಬರಹ ಹಾಗೂ ಉದ್ಯೋಗ ಪಡೆಯುವ ಸಾಧನವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬದುಕಲು ಮಾರ್ಗದರ್ಶನ ನೀಡುವ ಪ್ರಕ್ರಿಯೆಯಾಗಿದೆ. ಬರೀ ಜೀವನ ನಿರ್ವಹಣೆಗೆ ಬೇಕಾದ ಶಿಕ್ಷಣವನ್ನು ಮಾತ್ರ ಕಲಿಸಿದರೆ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರಗಳು ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳ ಬಾಲ್ಯದಲ್ಲಿಯೇ ಉತ್ತಮ ನಡವಳಿಕೆ, ಶಿಸ್ತು, ಪ್ರೀತಿ, ಸಹಬಾಳ್ವೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಬಾಲ್ಯದಲ್ಲೆ ಸಂಸ್ಕಾರ:

ಸಾಹಿತಿ ಜಡೇಕುಂಟೆ ಮಂಜುನಾಥ್ ಮಾತನಾಡಿ, ಬಾಲ್ಯದಲ್ಲಿ ಮಕ್ಕಳು ಕಲಿಯುವ ಸಂಸ್ಕಾರ ಮತ್ತು ಮೌಲ್ಯಗಳು ಅವರ ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ನೀಡುವ ಉತ್ತಮ ಮಾರ್ಗದರ್ಶನ ಅವರ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಬಾಲ್ಯದಲ್ಲಿ ಕಲಿತ ಒಳ್ಳೆಯ ಹವ್ಯಾಸಗಳು, ಶಿಸ್ತು, ಹಿರಿಯರ ಮೇಲಿನ ಗೌರವ ಹಾಗೂ ಸಮಾಜದ ಬಗ್ಗೆ ಇರುವ ಕಾಳಜಿ ಮುಂದಿನ ದಿನಗಳಲ್ಲಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತವೆ ಎಂದು ಹೇಳಿದರು.

ಮಕ್ಕಳಲ್ಲಿ ಓದುವ ಹವ್ಯಾಸ, ಕನ್ನಡ ಭಾಷೆಯ ಮೇಲಿನ ಅಭಿಮಾನ, ನಾಡು-ನುಡಿಯ ಬಗ್ಗೆ ಗೌರವ ಹಾಗೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ತಮ್ಮ ಬಾಲ್ಯದ ಮಹತ್ವದ ಅರಿವಿನ ಜೊತೆಗೆ ಕನ್ನಡ ನಾಡಿನ ಇತಿಹಾಸ, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ದಿನಾಚರಣೆ ಮಕ್ಕಳ ಪ್ರತಿಭೆ, ಸಂತೋಷ ಹಾಗೂ ಅವರಲ್ಲಿರುವ ಸೃಜನಶೀಲತೆಯನ್ನು ಗುರುತಿಸುವ ವಿಶೇಷ ಸಂದರ್ಭವಾಗಿದೆ. ಅದೇ ರೀತಿ ಕನ್ನಡ ರಾಜ್ಯೋತ್ಸವವು ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಹತ್ವದ ದಿನವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ಜೀವನಾನುಭವ ಮತ್ತು ಸಾಂಸ್ಕೃತಿಕ ಅರಿವನ್ನು ನೀಡಲು ಸಾಧ್ಯವಾಗುತ್ತದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ನಡವಳಿಕೆಯನ್ನು ಬೆಳೆಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದರು.

ರತ್ನ ಮಾತಾಜೀ ಸ್ವಾಗತಿಸಿ ನಿರೂಪಿಸಿದರು. ಸ್ವಪ್ನ ಮಾತಾಜೀ, ಸಂಸ್ಥೆಯ ಸಿಬ್ಬಂದಿ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

ಪೋಟೋ

ಚಿತ್ರದುರ್ಗ ನಗರದ ಜ್ಞಾನ ಸೌರಭ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಮಕ್ಟಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ