ಬೀದಿ ನಾಯಿಗಳ ರೌದ್ರಾವತಾರ: ದನವನ್ನು ಕಚ್ಚಿ ಕೊಂದ ಶ್ವಾನಗಳ ಹಿಂಡು!

KannadaprabhaNewsNetwork |  
Published : Nov 16, 2026, 01:45 AM IST
ಕೊಪ್ಪ ತಾಲೂಕಿನ​ ಉತ್ತಮೇಶ್ವರದಲ್ಲಿ ಬೀದಿ ನಾಯಿಗಳ ರೌದ್ರಾವತಾರ: ಅಪಘಾತಕ್ಕೀಡಾಗಿದ್ದ ದನವನ್ನು ಕಚ್ಚಿ ಕೊಂದ ಶ್ವಾನಗಳ ಹಿಂಡು! | Kannada Prabha

ಸಾರಾಂಶ

ಕೊಪ್ಪರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ದನದ ಮೇಲೆ ಮುಗಿಬಿದ್ದ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಕಚ್ಚಿ ಎಳೆದಾಡಿ ಬರ್ಬರವಾಗಿ ಸಾಯಿಸಿರುವ ಘಟನೆ ಸ್ಥಳೀಯರನ್ನು ತೀವ್ರ ಆಘಾತಕ್ಕೀಡುಮಾಡಿದೆ.

ಕಠಿಣ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

​ಕನ್ನಡಪ್ರಭ ವಾರ್ತೆ ಕೊಪ್ಪ

ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ದನದ ಮೇಲೆ ಮುಗಿಬಿದ್ದ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಕಚ್ಚಿ ಎಳೆದಾಡಿ ಬರ್ಬರವಾಗಿ ಸಾಯಿಸಿರುವ ಘಟನೆ ಸ್ಥಳೀಯರನ್ನು ತೀವ್ರ ಆಘಾತಕ್ಕೀಡುಮಾಡಿದೆ.

ತಾಲೂಕಿನ ಉತ್ತಮೇಶ್ವರ ಗ್ರಾಮದ ಕೇಂದ್ರ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಆತಂಕದ ನೆರಳಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ​ಶ್ವಾನಗಳ ಹಿಂಡಿನ ಭೀಕರ ದಾಳಿಗೆ ತುತ್ತಾದ ದನದ ಮುಖ ಹಾಗೂ ದೇಹದ ಭಾಗಗಳು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ರಕ್ತಸಿಕ್ತ ದೃಶ್ಯ ಗ್ರಾಮಸ್ಥರ ಕಣ್ಣೀರು ತರಿಸುವಂತಿತ್ತು. ಬೀದಿ ನಾಯಿಗಳ ಈ ಹಿಂಸಾತ್ಮಕ ವರ್ತನೆ ಸಾರ್ವಜನಿಕರ ಆತಂಕ ದುಪ್ಪಟ್ಟುಗೊಳಿಸಿದೆ.

​ಪ್ರಮುಖ ಕೇಂದ್ರಗಳಲ್ಲೇ ಕಾದಿದೆ ಗಂಡಾಂತರ:

​ಗ್ರಾಪಂ ಕಾರ್ಯಾಲಯ, ದೇವಸ್ಥಾನ ಹಾಗೂ ಬ್ಯಾಂಕ್‌ನಂತಹ ಸದಾ ಜನಸಂದಣಿಯ ಪ್ರಮುಖ ಸ್ಥಳಗಳ ಸಮೀಪದಲ್ಲೇ ಈ ಘಟನೆ ನಡೆದಿರುವುದು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು, ಬ್ಯಾಂಕ್ ವ್ಯವಹಾರಗಳಿಗೆ ಬರುವ ನಾಗರಿಕರು, ಹಿರಿಯರು ಮತ್ತು ನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ಪುಟ್ಟ ಮಕ್ಕಳು ಇದೇ ಮಾರ್ಗದಲ್ಲಿ ಆತಂಕದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

​ನಾಳೆ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವ ಪುಟ್ಟ ಮಕ್ಕಳು ಅಥವಾ ವೃದ್ಧರ ಮೇಲೆ ದಾಳಿ ನಡೆಸಿದರೆ ಅವರ ಗತಿಯೇನು?ಎಂದು ಗ್ರಾಮದ ಪೋಷಕರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಸ್ಥಳೀಯ ಆಡಳಿತಕ್ಕೆ ಗ್ರಾಮಸ್ಥರ ಎಚ್ಚರಿಕೆ:

​ಇನ್ನೊಂದು ದೊಡ್ಡ ಅನಾಹುತ ಸಂಭವಿಸುವ ಮುನ್ನ ಗ್ರಾಪಂ ಹಾಗೂ ಸ್ಥಳೀಯ ಆಡಳಿತ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಹಾಕಿ, ಸಾರ್ವಜನಿಕರ ಸುರಕ್ಷತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸೋಮವಾರ ಕನ್ನಡ ಪ್ರಭ ಪತ್ರಿಕೆಯಲ್ಲಿ ಕೊಪ್ಪ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾದ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಇದೀಗ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಸಹ ಬೀದಿ ನಾಯಿ ಉಪಟಳ ಅತಿರೇಕಕ್ಕೆ ಹೋಗಿದ್ದು, ತಕ್ಷಣವೇ ಸಂಭಂದಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಕೂಡಲೇ ಎಚ್ಚೆತ್ತು ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರೇಶ್ವರ ಪುಣ್ಯಾಶ್ರಮದ ಸೇವಾ ಕಾರ್ಯಗಳಿಗೆ ಭಕ್ತರ ಸಹಕಾರವೇ ದೊಡ್ಡ ಶಕ್ತಿ
ಮಕ್ಕಳಿಗೆ ಶಿಕ್ಷಣ, ಸುರಕ್ಷಿತ ಬಾಲ್ಯ ಒದಗಿಸುವುದು ನಮ್ಮ ಜವಾಬ್ದಾರಿ