ಭಕ್ತರ ಸಹಕಾರವೇ ವೀರೇಶ್ವರ ಪುಣ್ಯಾಶ್ರಮದ ಜೀವಾಳ ಹಾಗೂ ಬೆನ್ನೆಲುಬಾಗಿದೆ. ಭಕ್ತರು ತುಲಾಭಾರದ ಮೂಲಕ ತೋರುತ್ತಿರುವ ಉದಾರತೆ ಮತ್ತು ಸೇವಾ ಮನೋಭಾವ ಸಂತಸ ತಂದಿದೆ.

ಬಳ್ಳಾರಿ: ಅಂಧ ಹಾಗೂ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಸೇವಾ ಕಾರ್ಯಗಳಿಗೆ ಭಕ್ತರ ಸಹಕಾರವೇ ದೊಡ್ಡ ಶಕ್ತಿಯಾಗಿದೆ ಎಂದು ಪರಮಪೂಜ್ಯ ಡಾ. ಕಲ್ಲಯ್ಯ ಅಜ್ಜ ಹೇಳಿದರು.

ನಗರದ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಶ್ರೀಕುಮಾರೇಶ್ವರ ಸಂಗೀತ ಹಾಗೂ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಡಾ. ಕಲ್ಲಯ್ಯ ಅಜ್ಜನವರ ತುಲಾಭಾರ ಸ್ವೀಕರಿಸಿ ಮಾತನಾಡಿದರು.

ಭಕ್ತರ ಸಹಕಾರವೇ ವೀರೇಶ್ವರ ಪುಣ್ಯಾಶ್ರಮದ ಜೀವಾಳ ಹಾಗೂ ಬೆನ್ನೆಲುಬಾಗಿದೆ. ಭಕ್ತರು ತುಲಾಭಾರದ ಮೂಲಕ ತೋರುತ್ತಿರುವ ಉದಾರತೆ ಮತ್ತು ಸೇವಾ ಮನೋಭಾವ ಸಂತಸ ತಂದಿದೆ. ಆದರೆ ಇಂದು ನಡೆಯುತ್ತಿರುವ ತುಲಾಭಾರ ನನ್ನದಲ್ಲ. ಇದು ಅಂಧ ಹಾಗೂ ಅನಾಥ ಮಕ್ಕಳ ತುಲಾಭಾರ. ಈ ಕಾರ್ಯದಲ್ಲಿ ನಾನು ಕೇವಲ ನಿಮಿತ್ತ ಮಾತ್ರ ಎಂದು ಭಾವುಕರಾಗಿ ನುಡಿದರು. 24 ಕುಟುಂಬಗಳು ತುಲಾಭಾರ ಸೇವೆಯಲ್ಲಿ ಪಾಲ್ಗೊಂಡಿದ್ದವು.

ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಎಂ. ಮಲ್ಲಿನಾಥ ಶಾಸ್ತ್ರಿ ಅಡ್ನೂರು ಮಾತನಾಡಿ, ದೇವರಿಗೆ ಆಡಂಬರದ ಸೇವೆ ಸಲ್ಲಿಸುವುದಕ್ಕಿಂತ ನೊಂದವರ, ಹಸಿದವರ ನೆರವಿಗೆ ಧಾವಿಸುವುದೇ ಶ್ರೇಷ್ಠ ಸೇವೆ. ಇಂತಹ ಮಾನವೀಯ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟವರು ಪಂಡಿತ್ ಪುಟ್ಟರಾಜ ಗವಾಯಿಗಳು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪಕ ಹಾನಗಲ್ ಕುಮಾರಸ್ವಾಮಿಗಳು ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು.

ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದರಾದ ಎಂ.ಮಲ್ಲಿನಾಥ ಶಾಸ್ತ್ರಿ ಅಡ್ನೂರು, ಎಂ.ಮಲ್ಲಿಕಾರ್ಜುನ, ಗವಿಸಿದ್ದಪ್ಪ ಮಲ್ಲಪ್ಪ ಹಾಗೂ ವೀರಭದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಗಂಡೂರು ಮುಖ್ಯಗುರು ಎಂ.ಎಸ್. ಪಾಟೀಲ್, ಗಂಗಾವತಿಯ ಕಾಶೀಂ ಅಲಿ ಮುದ್ದಾಬಳ್ಳಿ, ರುದ್ರೇಶ್, ದಿವಾಕರ, ಗಂಗಾವತಿಯ ಮುಖ್ಯಗುರು ಪ್ರಕಾಶ್ ಪಾಟೀಲ್, ಸಂಗೀತ ಶಿಕ್ಷಕ ದೊಡ್ಡಯ್ಯ ಕಲ್ಲೂರು, ಶ್ರೀಕುಮಾರೇಶ್ವರ ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷೆ ವೀರಮ್ಮ, ಡಾ. ಸಿ.ಎಂ. ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಂತರ ಸೃಷ್ಟಿ ಸುರೇಶ್, ಜಯಲಕ್ಷ್ಮಿ, ತಸ್ಮೈ ಅನ್ನಪೂರ್ಣ, ಶ್ರೀಲತಾ, ಚನ್ನಬಸಮ್ಮ ಹಿರೇಮಠ, ಚೆನ್ನಯ್ಯ ಮಠದ ಸೇರಿದಂತೆ ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಂಕರ್ ಬಿನ್ನಾಳ್, ವೀರಭದ್ರಪ್ಪ ಅಂಗಡಿ ಹಾಗೂ ರವೀಂದ್ರ ಸಿಂಗ್ ಠಾಕೂರ್ ವಾದ್ಯ ಸಾಥ್ ನೀಡಿದರು.