ನೀರು ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
ಪರಿಸರ ಬದಲಾವಣೆಯಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದು, ಇದರಿಂದ ನೀರಿನ ಸಮಸ್ಯೆಯು ಎದುರಾಗುತ್ತಿದೆ. ಅದಕ್ಕಾಗಿ ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು. ಅದರ ಜೊತೆಯಲ್ಲಿ ಜಲಮೂಲಗಳ ಸಂರಕ್ಷಣೆ ಮಾಡಲು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಮುಂದಾಗಬೇಕು ಎಂದು ಅಲ್ಟ್ರಾಟೇಕ್ ಸಿಮೆಂಟ್ ಪ್ರೈ ಲಿಮಿಟೆಡನ ಉತ್ತರ ಕರ್ನಾಟಕ ಹಾಗೂ ಗೋವಾ ಭಾಗದ ತಾಂತ್ರಿಕ ಮುಖ್ಯಸ್ಥ ಅಶೋಕ ರೆಡ್ಡಿ ಕೊಲ್ಲೂರ ಹೇಳಿದರು.
ಗುರುವಾರ ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿ.ಡಿ.ಐ.ಟಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದವರು ನೀರು ಸಂರಕ್ಷಣೆ ಕುರಿತು ಆಯೋಜಿಸಿದ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಭೂಮಿಯ ಮೇಲೆ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಶೇ.3ರಷ್ಟು ಮಾತ್ರ ಮಾತ್ರ ಕುಡಿಯುವುದಕ್ಕೆ ಯೋಗ್ಯವಾಗಿದೆ. ಪ್ರತಿ ಜೀವಿಗೂ ಕುಡಿಯುಲು ನೀರು ಬೇಕು, ಹೀಗಾಗಿ ಜಲಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ನೀರು ಪೋಲು ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದರು.
ಈಗಲೇ ನಾವು ನೀರಿಗಾಗಿ ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ಮಾಡುವಂತಹ ಪ್ರಸಂಗಗಳ ಬರಬಹುದೆಂದು ಎಚ್ಚರಿಸಿದರು. ಕಾಲೇಜಿನಲ್ಲಿ ಅಂತರ್ಜಲ ಸಮೃದ್ಧಿಕರಣಕ್ಕಾಗಿ ಮಳೆ ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದ್ದು, ನೀರಿನ ಸದ್ಭಳಕೆಯ ಬಗ್ಗೆ ನಾವು ಜಾಗೃತಿ ವಹಿಸಿದ್ದೇವೆ ಎಂದರು. ಅಲ್ಟ್ರಾಟೇಕ್ ಸಿಮೆಂಟಿನ ಗಿರೀಶ್ ಪವಾರ್ ಹಾಗೂ ಪ್ರಸನ್ನ ಉಪ್ಪೀನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಂಕ್ರೀಟ್ ಟೆಕ್ನಾಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಅಭಿಷೇಕ್ ಯಂತೂರ ಅವರನ್ನು ಅಲ್ಟ್ರಾಟೇಕ್ ವತಿಯಿಂದ ಗೌರವಿಸಲಾಯಿತು.ಸಿವಿಲ್ ವಿಭಾಗ ಮುಖ್ಯಸ್ಥ ಪ್ರೊ. ಹರ್ಷ ಜಾಧವ, ಡಾ. ಸ್ನೇಹಾ ಕುಲಕರ್ಣಿ ಮತ್ತು ಪ್ರೊ. ಸೀಮಾ ಬಸರಿಕಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು. ಕಾಲೇಜಿನ 180ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.