ಕನ್ನಡಪ್ರಭ ವಾರ್ತೆ ಹೊಸಪೇಟೆ ವಿಜಯನಗರ ಜಿಲ್ಲೆಯಾಗಿಯೇ ಮುಂದುವರಿದರೆ ಒಳ್ಳೆಯದು. ಜಿಲ್ಲಾಡಳಿತ ಪ್ರತ್ಯೇಕವಾದ ಮೇಲೆ ಮತ್ತೆ ಒಂದು ಮಾಡಿದರೆ ತಪ್ಪಾಗುತ್ತದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಯಾವಾಗಲೂ ಸಹೋದರರು. ಜತೆಯಾಗಿ ಬದುಕೋಣ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು. ಸಚಿವ ಬಿ. ನಾಗೇಂದ್ರ ಅವರು ವಿಜಯನಗರ ಜಿಲ್ಲೆಯನ್ನು ಅಖಂಡ ಬಳ್ಳಾರಿ ಜಿಲ್ಲೆಗೆ ಮತ್ತೆ ಸೇರ್ಪಡೆ ಮಾಡುವ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಜಿಲ್ಲೆ ಒಗ್ಗೂಡಿಸಬೇಕು ಅಂತ ಪದೇ ಪದೇ ಹೇಳುವುದು ಸರಿಯಲ್ಲ. ಜಿಲ್ಲೆ ರಚನೆ ಬಳಿಕ ಆಡಳಿತ ಬಂದಿದ್ದು, ಸುಗಮವಾಗಿ ನಡೆಯುತ್ತಿದೆ ಎಂದರು. ಶಾಲಾ ಪಠ್ಯದಲ್ಲಿ ಇನ್ಮುಂದೆ ಇಂಡಿಯಾ ಬದಲು, ಭಾರತ ಅಂತ ಬಳಸಲು ಉನ್ನತ ಸಮಿತಿಯಿಂದ ಶಿಫಾರಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಲಮಾನಕ್ಕೆ ಎಲ್ಲ ಹೆಸರುಗಳು ಬದಲಾಗುತ್ತದೆ. ಈ ಹಿಂದೆ ಹಲವು ನಗರಗಳು, ಪಟ್ಟಣಗಳ ಹೆಸರುಗಳು ಬದಲಾಗಿವೆ. ಇಂಡಿಯಾ ಬದಲು, ಭಾರತ ಬದಲಾವಣೆ ಆದರೆ ಆಗಲಿ ಬಿಡಿ. ಪಠ್ಯಗಳಲ್ಲಿ ಹಳೆಯ ಇತಿಹಾಸ ನಮೂದು ಮಾಡುವುದರ ಬದಲು, ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಬರೆಯಬೇಕು. ಹೆಚ್ಚು, ಹೆಚ್ಚು ಸ್ವಾತಂತ್ರ‍್ಯ ಹೋರಾಟಗಾರ ಕುರಿತು ಪಠ್ಯಗಳಲ್ಲಿ ನಮೂದು ಮಾಡಿದರೆ ಒಳ್ಳೆಯದು ಎಂದರು.