ಸಾರ್ವಜನಿಕ ಸೇವೆಯಲ್ಲಿ ಒತ್ತಡಗಳ ನಡುವೆ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಸೇವೆ ಸಲ್ಲಿಸುವುದು ಅನಿವಾರ್ಯವಾದರೂ, ಹಾನಗಲ್ಲ ತಾಲೂಕಿನಲ್ಲಿ ತಹಸೀಲ್ದಾರ್‌ರಾಗಿ ಸೇವೆ ಸಲ್ಲಿಸುತ್ತಿರುವ ಅವಧಿ ನನಗೆ ಸಂಪೂರ್ಣ ಸಂತೃಪ್ತಿದಾಯಕವಾಗಿದೆ ಎಂದು ತಹಸೀಲ್ದಾರ್ ಎಸ್.ರೇಣುಕಾ ತಿಳಿಸಿದರು.
ಹಾನಗಲ್ಲ: ಸಾರ್ವಜನಿಕ ಸೇವೆಯಲ್ಲಿ ಒತ್ತಡಗಳ ನಡುವೆ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಸೇವೆ ಸಲ್ಲಿಸುವುದು ಅನಿವಾರ್ಯವಾದರೂ, ಹಾನಗಲ್ಲ ತಾಲೂಕಿನಲ್ಲಿ ತಹಸೀಲ್ದಾರ್‌ರಾಗಿ ಸೇವೆ ಸಲ್ಲಿಸುತ್ತಿರುವ ಅವಧಿ ನನಗೆ ಸಂಪೂರ್ಣ ಸಂತೃಪ್ತಿದಾಯಕವಾಗಿದೆ ಎಂದು ತಹಸೀಲ್ದಾರ್ ಎಸ್.ರೇಣುಕಾ ತಿಳಿಸಿದರು.ಶುಕ್ರವಾರ ಹಾನಗಲ್ಲಿನ ಗುರುಭವನದಲ್ಲಿ ತಾಲೂಕಿನ ಪ್ರಗತಿಪರ ಸಂಘಟನೆ, ಉತ್ತರ ಕರ್ನಾಟಕ ಹೋರಾಟ ಸಮಿತಿ, ರೋಶನಿ ಸೇವಾ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ರಾಷ್ಟ್ರೀಯ ಅಹಿಂದ ಸಂಘಟನೆ, ಕನ್ನಡ ಜಾಗೃತಿ ವೇದಿಕೆ, ಕದಳಿ ಮಹಿಳಾ ವೇದಿಕೆ, ಲೋಯಲಾ ವಿಕಾಸ ಕೇಂದ್ರ, ರೋಶನಿ ಸಮಾಜ ಸೇವಾ ಸಂಸ್ಥೆ, ಭಾರತೀಯ ಕೃಷಿ ಕಾರ್ಮಿಕರ ಸಂಘ, ಅಖಂಡ ಕರ್ನಾಟಕ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹಕ್ಕುಪತ್ರ ವಿತರಣೆಯಲ್ಲಿ ದಾಖಲೆಯ ಸೇವೆ ಹಾಗೂ 49 ಲಕ್ಷ ಕಂದಾಯ ದಾಖಲೆಗಳನ್ನು ಡಿಜಿಟಲೀಕರಗೊಳಿಸಿ ಸಾಧನೆಗೈದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಬ್ಬರೇ ಎಲ್ಲವನ್ನು ಮಾಡಿಬಿಡುತ್ತೇವೆ ಎಂಬ ಹಮ್ಮು ಬಿಮ್ಮು ಬಿಟ್ಟು ಇಲಾಖೆಯ ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೇವೆ ಸಲ್ಲಿಸಿದ್ದರಿಂದ ಇಂಥ ಸಾಧನೆ ಸಾಧ್ಯವಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿ ಕಚೇರಿ ಸಮಯವನ್ನು ಹೊರತುಪಡಿಸಿಯೂ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು, ಶಾಸಕರ ಸಹಕಾರವು ಕೂಡ ಅತ್ಯಂತ ಪ್ರಶಂಶನೀವಾದುದು. ಈ ಎರಡೂ ಕೆಲಸದ ಒತ್ತಡದಲ್ಲಿ ಇತರ ಸಾರ್ವಜನಿಕರ ಸೇವೆಗೆ ತೊಂದರೆಯಾದಾಗ ಹಲವರು ರೇಗಾಡಿ, ನಂತರ ನನ್ನ ಪರಿಸ್ಥಿತಿ ಅರಿತು ಸಮಾಧಾನಗೊಂಡಿದ್ದು ಇದೆ. ಇದೆಲ್ಲ ಸರ್ಕಾರಿ ಸೇವೆಯಲ್ಲಿ ಅನಿವಾರ್ಯ. ಅತಿ ದೊಡ್ಡ ಹಾನಗಲ್ಲ ತಾಲೂಕು ನನಗೆ ತಹಸೀಲ್ದಾರ ಕೆಲಸದಲ್ಲಿ ಬಹಳಷ್ಟು ಕಲಿಸಿದೆ. ಆ ಕಾರಣಕ್ಕಾಗಿಯೇ ನನಗೆ ಸಮಾಧಾನವಿದೆ. ಸಾರ್ವಜನಿಕರು ಅಭಿನಂದಿಸಿರುವುದು ನಿಜಕ್ಕೂ ನನಗೆ ಇನ್ನಷ್ಟು ಒಳ್ಳೆಯ ಸೇವೆ ಸಲ್ಲಿಸಲು ಸ್ಫೂರ್ತಿ ನೀಡಿದೆ ಎಂದರು. ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಒಬ್ಬ ಮಹಿಳೆ ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ತಾಲೂಕಿನ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ನಿಜಕ್ಕೂ ಅಭಿನಂದನೀಯ. ಹಾನಗಲ್ಲ ತಾಲೂಕಿನಲ್ಲಿ ಧರ್ಮಾ ನದಿ ಹರಿದಿದೆ. ಇದು ಧರ್ಮದಿಂದ ನಡೆಯುವ ತಾಲೂಕು. ಇಲ್ಲಿ ಜಾತಿ ಮತ ಪಂಥಗಳಿಗಿಂತ ಒಳ್ಳೆಯ ಸೇವೆ ಸಲ್ಲಿಸುವವರಿಗೆ ಒಳ್ಳೆಯ ಬೆಂಬಲ ಸಹಕಾರ ಇದೆ ಎಂದರು. ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಹಾನಗಲ್ಲ ತಾಲೂಕು ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದ ತಾಲೂಕು. ಇಲ್ಲಿ ಉತ್ತಮ ಹೆಸರು ಮಾಡಿದವರು ಇಡೀ ರಾಜ್ಯದಲ್ಲಿ ಎಲ್ಲಿಯಾದರೂ ಅತ್ಯುತ್ತಮ ಸೇವೆ ಸಲ್ಲಿಸುವ ಸಾಮರ್ಥ್ಯ ಇದ್ದವರು ಎಂದು ಅರ್ಥ ಎಂದರು. ವರದಾ ಬೇಡ್ತಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ.ಕೋತಂಬರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೈರೋಜ ಶಿರಬಡಗಿ ಸನ್ಮಾನ ಪತ್ರ ಓದಿದರು. ಎಸ್.ಎಂ.ಕೋತಂಬರಿ ಆಶಯ ನುಡಿ ನುಡಿದರು. ಶಿರಬಡಗಿ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ, ಗ್ರೇಡ್-2 ತಹಸೀಲ್ದಾರ ವಿಠಲ್ ಚೌಗುಲಾ, ಮಹೇಶ ಪವಾಡ, ರೈತ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ತಾಲೂಕು ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪ್ರೇಮಾ ಮುದಿಗೌಡರ, ಅಡಿವೆಪ್ಪ ಆಲದಕಟ್ಟಿ, ಉಮೇಶ ಮುದಿಗೌಡರ್, ಶಿವಗಂಗಕ್ಕ ಪಟ್ಟಣದ, ರೇಖಾ ಶೆಟ್ಟರ, ವಿಜಯಲಕ್ಷ್ಮಿ ಕೋತಂಬರಿ, ಲಿಂಗರಾಜ ಬಣಕಾರ, ರವಿ ಪುರೋಹಿತ, ಸಿದ್ದು ಗೌರಣ್ಣನವರ ವೇದಿಕೆಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.