ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಅವ್ಯವಹಾರ: ಗಣೇಶ್ ಆರೋಪ

KannadaprabhaNewsNetwork |  
Published : Mar 14, 2026, 02:00 AM IST
ಹಗರಿಬೊಮ್ಮನಹಳ್ಳಿ ಪುರಸಭೆ ಸದಸ್ಯರು ಶುಕ್ರವಾರ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಾಮಾನ್ಯಸಭೆ ಕರೆಯದೆ, ಸಭೆಗಳಲ್ಲಿ ಕಾಮಗಾರಿಗಳ ಅನುಮೋದನೆ ಪಡೆಯದೇ ವಾರ್ಡಿನ ಸದಸ್ಯರನ್ನು ಪರಿಗಣಿಸದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ಹಗರಿಬೊಮ್ಮನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ಒದಗಿ ಬಂದ ಅನುದಾನದ ಮಾಹಿತಿಯನ್ನು ಪುರಸಭೆ ಅಧ್ಯಕ್ಷರು ಸದಸ್ಯರಿಗೆ ಒದಗಿಸುತ್ತಿಲ್ಲ. ನಾನಾ ಮೂಲಗಳಿಂದ ಹರಿದು ಬಂದಿರುವ ಕೋಟಿಗಟ್ಟಲೇ ಅನುದಾನ ಲೂಟಿಯಾಗಿದೆ ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯ ಎಲ್.ಗಣೇಶ್ ಆರೋಪಿಸಿದರು.

ಪುರಸಭೆ ಸದಸ್ಯರು ಶುಕ್ರವಾರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ ಸದಸ್ಯ ಎಲ್.ಗಣೇಶ್, ೨೦೨೩ರಿಂದ ೨೦೨೬ರವರೆಗೆ ಪಟ್ಟಣದ ಎಲ್ಲ ೨೩ ವಾರ್ಡ್‌ಗಳ ಅಭಿವೃದ್ಧಿಗಾಗಿ ಬಂದ ಅನುದಾನದ ವಿವರ ಹಾಗೂ ರಾಜ್ಯ, ಕೇಂದ್ರ ಸರ್ಕಾರ, ಇತರೆ ಯೋಜನೆಗಳಿಂದ ಬಂದ ಅನುದಾನ ಕುರಿತು ಅಧ್ಯಕ್ಷ ಮರಿರಾಮಣ್ಣ ಯಾವ ಸದಸ್ಯರಿಗೂ ಮಾಹಿತಿ ನೀಡುತ್ತಿಲ್ಲ. ಮಂಜೂರಾದ ಕಾಮಗಾರಿಗಳ ಹೆಸರು, ಪಾವತಿಸಿದ ಮೊತ್ತ, ಗುತ್ತಿಗೆದಾರರ ವಿವರ ಸದಸ್ಯರಿಗೆ ಒದಗಿಸದೇ ದುರಾಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

ಸಾಮಾನ್ಯಸಭೆ ಕರೆಯದೆ, ಸಭೆಗಳಲ್ಲಿ ಕಾಮಗಾರಿಗಳ ಅನುಮೋದನೆ ಪಡೆಯದೇ ವಾರ್ಡಿನ ಸದಸ್ಯರನ್ನು ಪರಿಗಣಿಸದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು. ಪೌರಾಡಳಿತದ ನೀತಿ- ನಿಯಮಗಳನ್ನು ಅಕ್ಷರಶಃ ಗಾಳಿಗೆ ತೂರಿ ಏಕಪಕ್ಷೀಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಯಾವುದೇ ದೃಢೀಕೃತ ಮಾಹಿತಿ ಒದಗಿಸದೇ ಕಾಲಹರಣ ಮಾಡಿದರೆ ಮುಂದಿನ ದಿನಗಳಲ್ಲಿ ಅಧ್ಯಕ್ಷ ಮರಿರಾಮಣ್ಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಖಾಜಾಬನ್ನಿ ಅಲ್ಲಾಭಕ್ಷಿ, ರಾಜೇಶ್ ಬ್ಯಾಡಗಿ, ತೆಲಗಿ ಇಸ್ಮಾಯಿಲ್, ಡಿ.ಎಂ. ಅಜೀಜುಲ್ಲಾ, ನಾಗರಾಜ್ ಜನ್ನು, ಬಣಕಾರ್ ಸುರೇಶ್, ಜೋಗಿ ಹನಮಂತಪ್ಪ, ದೀಪಕ್ ಕಠಾರೆ, ಪಿ.ನವೀನಕುಮಾರ್, ಕಮಲಮ್ಮ ಶಿವಮೊಗ್ಗ, ಬಿ.ಗಂಗಾಧರ್, ಎ.ಆರ್. ಮಂಗಳಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ