ಶಿಗ್ಗಾಂವಿ: ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಬೆಳೆಯುವುದು ಮುಖ್ಯವಾಗಿದೆ, ನಾಡು, ನುಡಿ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಹೋರಾಡುವ ಮೂಲಕ ದೇಶಕ್ಕೆ ನಮ್ಮದೆಯಾದ ಕೊಡುಗೆ ನೀಡುವಂತಾಗಬೇಕು. ಆದ್ದರಿಂದ ಬದುಕು ಸಾರ್ಥಕವಾಗುತ್ತದೆ ಎಂದು ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿಮನಮರದ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ೧೨ನೇ ಶತಮಾನದ ಬಸವಣ್ಣ, ಹಡಪದ ಅಪ್ಪಣ್ಣ, ಮಾದಾರ ಚೆನ್ನಯ್ಯ, ಹರಳಯ್ಯ ಮತ್ತು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವಾರು ಮಹಾತ್ಮರು ಈ ನಾಡಿಗಾಗಿ ಶ್ರಮಿಸಿದವರು. ಅಂತಹ ಮಹಾನ್ ಪುರುಷರ ಜಯಂತಿಗಳನ್ನು ಎಲ್ಲ ಸಮುದಾಯದವರು ಸಂಭ್ರಮದಿಂದ ಆಚರಿಸಬೇಕು ಎಂದರು.
ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅಧ್ಯಕ್ಷೆ ವಹಿಸಿ ಮಾತನಾಡಿ, ‘ಕಿತ್ತೂರು ರಾಣಿ ಚನ್ನಮ್ಮ ಸಂಸ್ಥಾನ ಸೇರಿದಂತೆ ನಾಡಿನ ಅನೇಕ ರಾಜ ಮನೆತನಗಳು ಬ್ರಿಟಿಷರ ವಿರುದ್ಧ ಹೋರಾಡಿರುವುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಪ್ರತಿಯೊಬ್ಬರು ತಮ್ಮಲ್ಲಿನ ಆಂತರಿಕ ವೈಮನಸ್ಸು ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.ಬಿಇಒ ಎಂ.ಬಿ.ಅಂಬಿಗೇರ, ಮುಖಂಡರಾದ ಶಿವಾನಂದ ಮ್ಯಾಗೇರಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ, ಪುರಸಭೆ ಸದಸ್ಯೆ ವಸಂತಾ ಬಾಗೂರ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪಂಚಮಸಾಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಬಾಗೂರ, ವೀರೇಶ ಆಜೂರ, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಯಡಪ್ಪನವರ, ಜಿಲ್ಲಾ ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಅರುಣ ಹುಡೇದಗೌಡ್ರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ರಮೇಶ ವನಹಳ್ಳಿ, ಮಾಲತೇಶ ಯಲಿಗಾರ, ಮಂಜುನಾಥ ಬ್ಯಾಹಟ್ಟಿ, ಶಂಕರಗೌಡ್ರ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸುತ್ತಲಿನ ಗ್ರಾಮಗಳು ಹಿರಿಯರು ಇದ್ದರು.