ಅಳ್ವೆಕೋಡಿಯಲ್ಲಿ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನಿಂದ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ವಿದ್ಯಾರ್ಥಿಗಳಿಗೆ ಅಂಕ ಮುಖ್ಯವಲ್ಲ. ನೈತಿಕ ಮೌಲ್ಯ ಬೆಳೆಸಿಕೊಳ್ಳುವುದು ಮುಖ್ಯ. ಅಂಕಕ್ಕಿಂತ ಹೊರತಾದವೂ ಇವೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ನೈತಿಕ ಪರಿಪಾಲನೆ ಅತೀ ಮುಖ್ಯ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಸಂಜೆ ಅಳ್ವೆಕೋಡಿಯ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಹಮ್ಮಿಕೊಳ್ಳಲಾದ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು. ಕೆಲವೊಮ್ಮೆ ಹೆಚ್ಚು ಅಂಕಪಡೆದರೂ ಸಾಕಾಗುವುದಿಲ್ಲ. ಜೀವನದಲ್ಲಿ ಯಶಸ್ವಿಯಾಗಲು, ಉನ್ನತ ಮಟ್ಟಕ್ಕೆ ಏರಲು ಕೌಶಲ್ಯ ಮತ್ತು ನೈತಿಕತೆ ತೀರಾ ಅಗತ್ಯವೆಂದ ಅವರು ಹೆಚ್ಚಿನ ಜ್ಞಾನ ಪಡೆದರೆ ಅಂಕವೂ ಹೆಚ್ಚು ಬರುತ್ತದೆ. ವಿದ್ಯೆ ಕಲಿತು ದೊಡ್ಡ ಸಿಟಿಗಳನ್ನು ಉದ್ಧಾರ ಮಾಡುವುದಕ್ಕಿಂತ ಸ್ಥಳೀಯವಾಗಿಯೇ ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು. ಸ್ಥಳೀಯವಾಗಿ ಕಲಿತವರಿಗೆ ಸ್ಥಳೀಯವಾಗಿಯೇ ಉತ್ತಮ ಉದ್ಯೋಗ ಲಭಿಸಿದರೆ ಅವರು ಎಲ್ಲಿಯೂ ಹೋಗುವುದಿಲ್ಲ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವ ಯೋಜನೆ ರೂಪಿಸಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕು ಎಂದರು. ಗುರುಗಳು ಮತ್ತು ದೇವರ ಬಗ್ಗೆ ಅಳ್ವೆಕೋಡಿ ಜನರು ಅಪಾರ ಭಕ್ತಿ ಹೊಂದಿದ್ದಾರೆ. ತಡವಾದರೂ ಸಹ ಪ್ರತಿಭಾ ಪುರಸ್ಕಾರವನ್ನು ಗುರುಗಳಿಂದಲೇ ಕೊಡಿಸಬೇಕು ಎನ್ನವ ಆಶಯ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ ಹೊಂದಿರುವುದು ಗುರುಗಳು ಮೇಲಿನ ಪ್ರೀತಿ, ಭಕ್ತಿಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುನೀಲ ನಾಯ್ಕ, ಕಳೆದ 13 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನಾರ್ಹ ಎಂದರು.ಅತಿಥಿಯಾಗಿದ್ದ ಅಳ್ವೆಕೋಡಿ ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ಮಾತನಾಡಿದರು. ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಮಾತನಾಡಿದರು. ವೇದಿಕೆಯಲ್ಲಿ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಟ್ರಸ್ಟಿ ಹನುಮಂತ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಜಟಕಾ ಮೊಗೇರ, ಬಿಳಿಯಾ ನಾಯ್ಕ, ಗೋಪಾಲ ಮೊಗೇರ, ಬಾಬು ಮೊಗೇರ. ಅಣ್ಣಪ್ಪ ಮೊಗೇರ ಇದ್ದರು. ಅರವಿಂದ ಪೈ ಸ್ವಾಗತಿಸಿದರೆ, ನಾರಾಯಣ ದೈಮನೆ ವಂದಿಸಿದರು. ರಾಜೀವಿ ಮೊಗೇರ ನಿರೂಪಿಸಿದರು. 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲಾ ₹1000 ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.