ಹೊಸಪೇಟೆ: ಸಾಹಿತ್ಯ ವಿಮರ್ಶೆಗೆ ಮಾನದಂಡಗಳು ಅನುಸರಿಸಿದಾಗ ಉತ್ಕೃಷ್ಟ ವಿಮರ್ಶೆಯಾಗುತ್ತದೆ. ಸಾಹಿತ್ಯವನ್ನು ವಿವಿಧ ಮಗ್ಗುಲಲ್ಲಿ ವಿಭಿನ್ನ ದೃಷ್ಟಿಯಿಂದ ನೋಡಿದಾಗ ಅದರಲ್ಲಿ ಹುದುಗಿರುವ ಸತ್ಯ ಬಯಲಿಗೆಳೆಯಲು ಸಾಧ್ಯವಾಗುತ್ತದೆ ಎಂದು ಡಾ.ದಯಾನಂದ ಕಿನ್ನಾಳ್ ಹೇಳಿದರು.ನಗರದ ನಿವೃತ್ತ ವೈದ್ಯೆ, ಸಾಹಿತಿ ಡಾ.ಸುಲೋಚನಾ ಅವರ ಮನೆಯಲ್ಲಿ ನಡೆದ ವಿಜಯನಗರ ಕನ್ನಡದ ಕಟ್ಟೆ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯದ ಭಾಷೆ, ತಂತ್ರಗಾರಿಕೆ, ವಸ್ತು, ವಿಷಯ, ಸ್ವರೂಪ, ನಿರೂಪಣಾ ಶೈಲಿ ಇವೆಲ್ಲವೂ ಕತೆಗಾರರು ಹೇಗೆ ಬಳಸಿಕೊಂಡಿದ್ದಾರೆಂಬುದು ವಿಮರ್ಶಕರು ಗುರುತಿಸಬೇಕಾಗುತ್ತದೆ. ವಿಮರ್ಶೆ ಆರೋಗ್ಯಪೂರ್ಣವಾಗಿರಬೇಕು. ವಿಮರ್ಶಕರು ಸುಖಕರವಾದ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದರು.
ಕಥೆಗಾರರಾದ ಡಾ.ಸುಲೋಚನಾ ಕಥಾಸಂಕಲನದ ಕುರಿತು ಮೆಲುಕು ಹಾಕಿದರು. ಜಿಲ್ಲೆಯ ಕಥೆಗಾರರ ಕತೆಗಳನ್ನು ವಿಮರ್ಶಿಸುವುದು ವಿಜಯನಗರ ಕನ್ನಡದ ಕಟ್ಟೆ ವೇದಿಕೆಯ ಉದ್ದೇಶ. ಪ್ರತಿ ತಿಂಗಳು ಎರಡನೇ ಭಾನುವಾರ ಒಬ್ಬೊಬ್ಬ ಕತೆಗಾರನ ಒಂದೊಂದು ಪುಸ್ತಕವನ್ನು ವಿಮರ್ಶೆಗೊಳಪಡಿಸಲಾಗುತ್ತದೆ. ಆಸಕ್ತ ಕತೆಗಾರರು ಭಾಗವಹಿಸಬಹುದು ಎಂದರು. ಸಾಹಿತಿ ಜಗದೀಶ ಬೆನ್ನೂರ್ ನಿರ್ವಹಿಸಿದರು.