ಮುಂಡರಗಿ: ನೌಕರರ ಕಾರ್ಯದೊತ್ತಡದ ನಡುವೆ ಮನರಂಜನೆ ಅವಶ್ಯಕವಾಗಿದ್ದು, ಕ್ರಿಕೆಟ್ ಆಟ ನೌಕರರಿಗೆ ಮನರಂಜನೆ ನೀಡುವುದಲ್ಲದೆ, ನೌಕರರಲ್ಲಿ ಸಮನ್ವಯತೆಯನ್ನು ಹಾಗೂ ಒಗ್ಗಟ್ಟನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.ಶನಿವಾರ ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮುಂಡರಗಿ ತಾಲೂಕು ಘಟಕದ ವತಿಯಿಂದ ತಾಲೂಕಿನ ನೌಕರರಿಗಾಗಿ ಗಣರಾಜ್ಯೋತ್ಸವದ ಅಂಗವಾಗಿ ಮುಂಡರಗಿ ಸರ್ಕಾರಿ ನೌಕರರ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್- 2(ಎಂಇಪಿಎಲ್ -ಟಿ10) ಟ್ರೋಫಿ ಅನಾವರಣ ಮಾಡಿ ಮಾತನಾಡಿದರು.
ಸರ್ಕಾರಿ ನೌಕಕರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ನೌಕರರ ಪರವಾದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಡರಗಿ ತಾಲೂಕು ಶಾಖೆ ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿ ನಿರಂತರವಾಗಿ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಿರುವುದಕ್ಕೆ ಅಭಿನಂದಿಸಿ ಇದೇ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲೂ ಕ್ರಿಕೆಟ್ ಪಂದ್ಯಗಳನ್ನು ಸಂಘಟಿಸಲಾಗುವದು ಎಂದರು.ತಾಪಂ ಇಒ ವಿಶ್ವನಾಥ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂಡರಗಿಯಲ್ಲಿ ನೌಕರರ ಸಂಘ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ನೌಕರರ ಹಿತ ಕಾಪಾಡುವಲ್ಲಿ ಶ್ರಮವಹಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ತಾಲೂಕಿನಲ್ಲಿ ಶೇ. 50ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ಇರುವ ನೌಕರರೇ ಒತ್ತಡದಲ್ಲಿ ಹೆಚ್ಚುವರಿ ಕೆಲಸ ಮಾಡುತ್ತಿದ್ದು, ತಾಲೂಕಿನ ಅಧಿಕಾರಿಗಳು ಹಾಗೂ ನೌಕರರು ಎಲ್ಲರೊಂದಿಗೆ ಬೆರೆತು ಮನರಂಜನೆಯನ್ನು ಅನುಭವಿಸಿ, ಒತ್ತಡಮುಕ್ತವಾಗಿ ಕಾರ್ಯನಿರ್ವಹಿಸಬೇಕೆನ್ನುವ ಉದ್ದೇಶ ಹಾಗೂ ನೌಕರರ ನಡುವೆ ಮತ್ತು ಇಲಾಖೆಗಳ ನಡುವೆ ಸೌಹಾರ್ದತೆ ತರಲು ಈ ಪ್ರಿಮೀಯರ್ ಲೀಗ್ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಆಟಗಾರರನ್ನು ಒಳಗೊಂಡ 10 ತಂಡಗಳು 2025ರ ಡಿ. 13ರಿಂದ 2026ರ ಜ. 18 ರ ರವರೆಗೆ ಪ್ರತಿ ಭಾನುವಾರ ಹಾಗೂ 2ನೇ ಹಾಗೂ 4 ನೇ ಶನಿವಾರಗಳಂದು ಪಂದ್ಯಗಳು ನಡೆಯಲಿದ್ದು, ಪ್ರತಿದಿನ 3 ಪಂದ್ಯಗಳು ನಡೆಯಲಿವೆ.ಕಾರ್ಯಕ್ರಮದಲ್ಲಿ ಮಂಜುನಾಥ ಮೇಗಳಮನಿ, ಕೀರ್ತಿಹಾಸ ಎಚ್.ಪಿ., ರಾಘವೇಂದ್ರ ಜೆ., ಶಿವಮೂರ್ತಿ ನಾಯ್ಕ, ವಿಜಯಕುಮಾರ ಬೆಣ್ಣಿ, ಶಂಕರ ಸರ್ವದೆ, ಮಲ್ಲಿಕಾರ್ಜುನ ಕಲಕಂಬಿ, ಶ್ರೀಧರ ದಾನಿ, ನಾಗೇಂದ್ರ ಪಟ್ಟಣಶೆಟ್ಟಿ, ಎಸ್.ಸಿ. ಹರ್ತಿ, ಜಗದೀಶ ಎ., ಎಸ್.ಎಸ್. ಮೇಟಿ, ಜಗದೀಶ ಗುಳ್ಳಾರಿ, ಮಹೇಶ ಅಲ್ಲಿಪುರ, ಶ್ರೀಕಾಂತ ಅರಹುಣಸಿ, ಮುತ್ತು ಸಂಶಿ, ಮಹಾಂತೇಶ ಹಲವಾಗಲಿ ಉಪಸ್ಥಿತರಿದ್ದರು. ಶಂಕರ ಸರ್ವದೆ ಸ್ವಾಗತಿಸಿದರು, ಶರಣು ಕಲಾಲ ನಿರೂಪಿಸಿದರು.