ಪುಸ್ತಕ ಪ್ರೀತಿ, ಓದುವ ಸಂಸ್ಕಾರ ಬೆಳೆಸುತ್ತಿರುವ ಸುಮುಖಾನಂದ ಜಲವಳ್ಳಿವಸಂತಕುಮಾರ್ ಕತಗಾಲ
"ಇಲ್ಲಿ ಪುಸ್ತಕಗಳಿಗೆ ಕ್ರಯ ಇಲ್ಲ. ಯಾವುದೇ ಪುಸ್ತಕ ತೆಗೆದುಕೊಳ್ಳಿ, ಇಷ್ಟ ಬಂದಷ್ಟು ಹಣ ಕೊಡಿ. ಪುಸ್ತಕ ಪ್ರೀತಿ, ಓದುವ ಸಂಸ್ಕಾರ ಬೆಳೆಸಿರಿ " ಎದುರುಗಡೆ ಹೀಗೊಂದು ಬೋರ್ಡು. ಹಿಂದುಗಡೆ ಬಿಳಿ ಜುಬ್ಬಾ ಧರಿಸಿ ಕುಳಿತುಕೊಂಡು ಪುಸ್ತಕ ಪ್ರೀತಿಯನ್ನು ಹಂಚುತ್ತಿದ್ದರೆ, ಅವರೇ ಸಾಹಿತಿ ಸುಮುಖಾನಂದ ಜಲವಳ್ಳಿ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಾಹಿತ್ಯ ಸಮ್ಮೇಳನ ಇರಲಿ, ಸಾಹಿತ್ಯದ ಸಮಾರಾಧನೆ ಇರಲಿ, ಅಲ್ಲೊಂದು ಇವರ ಪುಟ್ಟ ಮಳಿಗೆ ಇರಲೇಬೇಕು. ಎರಡೂವರೆ ವರ್ಷಗಳಿಂದ ಇಷ್ಟ ಬಂದಷ್ಟು ಹಣ ಕೊಟ್ಟವರಿಗೆ ಪುಸ್ತಕ ನೀಡುತ್ತಿದ್ದರೂ ಇವರಿಗೆ ಹಾನಿ ಆಗಿಲ್ಲ. ಯಾರೊಬ್ಬರೂ ಪುಸ್ತಕದ ಮುಖಬೆಲೆಗಿಂತ ಕಡಿಮೆ ಹಣ ನೀಡುವುದೇ ಇಲ್ಲ. ಹಾಗಂತ ಹೆಚ್ಚು ಹಣ ನೀಡುವವರೂ ಇದ್ದಾರೆ. ಆದರೆ ಅದನ್ನು ವಿನಯದಿಂದ ಮರಳಿಸುತ್ತಾರೆ.ದಕ್ಷಿಣ ಕನ್ನಡದ ಕಿನ್ನಿಗೋಳಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕನ್ನಡದ ಕಂಪು ಹರಡುತ್ತಿದ್ದ ಇವರು ಸಂಪ್ರಭಾ ಮಾಸಪತ್ರಿಕೆ ಆರಂಭಿಸಿ ಅಂಕಣ, ಕತೆ, ಕವನ ಮತ್ತಿತರ ಲೇಖನಗಳಿಗೆ ಅವಕಾಶ ನೀಡಿ ಲೇಖಕರನ್ನೂ ಪ್ರೋತ್ಸಾಹಿಸಿದರು. ತಮ್ಮದೇ ಆದ ಸುಮುಖ ಪ್ರಕಾಶನದ ಮೂಲಕ 88 ಪುಸ್ತಕಗಳನ್ನು ಹೊರತಂದು ಸಾಹಿತ್ಯ ಸಮ್ಮೇಳನಗಳಲ್ಲಿ ಆ ಪುಸ್ತಕಗಳ ಮಳಿಗೆ ಹಾಕಿ, ಕೊಟ್ಟಷ್ಟು ಹಣಕ್ಕೆ ಪುಸ್ತಕ ನೀಡಿ ಓದುವ ಸಂಸ್ಕಾರ ಬೆಳೆಸುತ್ತಿದ್ದಾರೆ.
ಮೂಲತಃ ಹೊನ್ನಾವರ ತಾಲೂಕಿನ ಜಲವಳ್ಳಿಯವರಾದ ಇವರು ಸದ್ಯ ಹೊನ್ನಾವರದ ಅರೆಅಂಗಡಿಯ ನಿವಾಸಿ. ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.ನಿವೃತ್ತಿ ಹೊಂದಿ 8 ವರ್ಷಗಳಾದರೂ ಪತ್ರಿಕೆ, ಪ್ರಕಾಶನ, ಕೃತಿ ರಚನೆ, ಪುಸ್ತಕ ಮಾರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ದಾಂಡೇಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಇವರ ಮಳಿಗೆ ಓದುಗರನ್ನು ಸೆಳೆಯುತ್ತಿದೆ.ಯುವ ಜನಾಂಗದಲ್ಲಿ ಓದುವ ಸಂಸ್ಕೃತಿ ಬೆಳೆಸುವ ಉದ್ದೇಶ ಹಾಗೂ ಪುಸ್ತಕ ಪ್ರೀತಿ ಬೆಳೆಸಲು ಈ ವಿನೂತನ ಕ್ರಮ ಕೈಗೊಂಡಿದ್ದೇನೆ. ಓದುಗರು ಯಾರೂ ಪುಸ್ತಕದ ಮುಖಬೆಲೆಗಿಂತ ಕಡಿಮೆ ಹಣ ಕೊಟ್ಟಿಲ್ಲ ಎನ್ನುತ್ತಾರೆ ಸಾಹಿತಿ, ಪ್ರಕಾಶಕ ಸುಮುಖಾನಂದ ಜಲವಳ್ಳಿ.