ಅಧಿಕಾರದಲ್ಲಿದ್ದಾಗ ಒಳ್ಳೆಯ ಕೆಲಸ ಮಾಡುವುದು ಮುಖ್ಯ: ಕೆ.ಬಿ.ಚಂದ್ರಶೇಖರ್

KannadaprabhaNewsNetwork | Published : Sep 3, 2024 1:33 AM

ಸಾರಾಂಶ

ಯಾರೇ ಆದರೂ ಅಧಿಕಾರ ಸಿಕ್ಕಾಗ ನಮ್ಮ ನಡವಳಿಕೆ ಚೆನ್ನಾಗಿರಬೇಕು. ಎಲ್ಲ ಸದಸ್ಯರನ್ನೂ ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಬೇಕು. ಪುರಸಭೆ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಅಗತ್ಯವಾದ ನೆರವು ಕೊಡಿಸಲು ನಾವು ಸಿದ್ಧರಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಕ್ಕ ಅಧಿಕಾರದಲ್ಲಿ ನಾವು ಒಳ್ಳೆಯ ಕೆಲಸಗಳನ್ನು ಮಾಡುವುದು ಮುಖ್ಯ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ನೂತನ ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್ ಅವರನ್ನು ಅಭಿನಂದಿಸಿ ಮಾತನಾಡಿ, ಯಾರೇ ಆದರೂ ಅಧಿಕಾರ ಸಿಕ್ಕಾಗ ನಮ್ಮ ನಡವಳಿಕೆ ಚೆನ್ನಾಗಿರಬೇಕು. ಎಲ್ಲ ಸದಸ್ಯರನ್ನೂ ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಬೇಕು. ಪುರಸಭೆ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಅಗತ್ಯವಾದ ನೆರವು ಕೊಡಿಸಲು ನಾವು ಸಿದ್ಧರಿದ್ದೇವೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲು ಶ್ರಮಿಸಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಪಾತ್ರವನ್ನು ಸ್ಮರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರಕುಮಾರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಉಸ್ತುವಾರಿ ಚಿನಕರುಳಿ ರಮೇಶ್, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್ ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು. ನೂರಾರು ಜನ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ನಾಳೆ, ನಾಡಿದ್ದು ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಡ್ಯ: ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ಶ್ರೀರಂಗಪಟ್ಟಣ ಸಮೀಪವಿರುವ ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ 66/11 ಕೆ.ವಿ ವಿದ್ಯುತ್ ಉಪ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಯನ್ನು ಸೆಪ್ಟೆಂಬರ್ 4 ಹಾಗೂ 5 ರಂದು ಕೈಗೊಳ್ಳಬೇಕಾಗಿರುವುದರಿಂದ ಸದರಿ ದಿನದಂದು ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ.ಮಂಡ್ಯ ನಗರದ ಸಾರ್ವಜನಿಕರಿಗೆ ಸೆಪ್ಟೆಂಬರ್ 4 ಹಾಗೂ 5 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಡ್ಯ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Share this article