ಬಳ್ಳಾರಿ: ಬಳ್ಳಾರಿಯ ಜನರ ಶಾಪದಿಂದ ಸಿಎಂ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆಯಾದರೆ ಸಿದ್ದರಾಮಯ್ಯ ಮಾಡಿರುವ ಹಗರಣ ಹೊರ ಬರುತ್ತದೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಸಿದ್ದರಾಮಯ್ಯ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನನ್ನನ್ನು ಖಳನಾಯಕನಂತೆ ಬಿಂಬಿಸಿದರು. ಬಳ್ಳಾರಿ ಅಭಿವೃದ್ಧಿಯ ಕನಸು ಕಂಡಿದ್ದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಈಗ ಅವರೇ ಅನುಭವಿಸುತ್ತಿದ್ದಾರೆ. ಅವರಂತೆ ನಾನು ಮಾತನಾಡುವುದಿಲ್ಲ. ಕೆಟ್ಟ ಭಾಷೆಯನ್ನು ಬಳಸುವುದಿಲ್ಲ. ಆದರೆ, ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ ಎಂಬ ನಂಬಿಕೆ ನನ್ನದು ಎಂದರು.
ವಾಲ್ಮೀಕಿ ನಿಗಮದ ಹಗರಣ ನಾಗೇಂದ್ರ ಒಬ್ಬರೇ ಮಾಡಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷವೇ ಇದೆ. ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ. ಹೀಗಾಗಿ ತುಕಾರಾಂ ಸಂಸದ ಸ್ಥಾನಕ್ಕೆ ಅನರ್ಹರಾಗುವುದು ಖಚಿತ ಎಂದು ತಿಳಿಸಿದರು.ಜನಾರ್ದನ ರೆಡ್ಡಿ ಲಕ್ಷ ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದರು. ನಾನು ಒಂದೇ ಒಂದು ರುಪಾಯಿ ಅವ್ಯವಹಾರ ಮಾಡಿಲ್ಲ. ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಾಗಲಿಲ್ಲ. ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿದ್ದ ಸಿದ್ದರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಬೇನಾಮಿಯಾಗಿ ಐದು ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ ಕೊಳ್ಳೆ ಹೊಡೆದಿದ್ದಾರೆ. ಈ ಎಲ್ಲವೂ ತನಿಖೆಯಾಗಬೇಕು. ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ಎಲ್.ಕೆ. ಅಡ್ವಾಣಿ ಮಾಡಿದ ಒಂದು ದೂರವಾಣಿ ಕರೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ಮಾನ, ಮರ್ಯಾದೆ, ನೀಚ ರಾಜಕಾರಣ ಎಂದೆಲ್ಲ ಮಾತನಾಡುವ ಸಿದ್ದರಾಮಯ್ಯ ಈ ಎಲ್ಲವನ್ನೂ ಮೀರಿದ್ದಾರೆ. ರಾಜೀನಾಮೆ ನೀಡದೇ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.
ಸಂಡೂರು ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿ ಎಂಬುದು ಮುಖ್ಯವಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಜನಾರ್ದನ ರೆಡ್ಡಿಗೆ ಭರ್ಜರಿ ಸ್ವಾಗತ:
ನಗರದ ಹೊರವಲಯದ ಅಲ್ಲೀಪುರ ಗ್ರಾಮದಿಂದ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಜನಾರ್ದನ ರೆಡ್ಡಿಯನ್ನು ಕರೆತರಲಾಯಿತು. ಕ್ರೇನ್‌ಗಳ ಮೂಲಕ ಬೃಹತ್ ಹೂವಿನ ಹಾರ, ಅಭಿಮಾನಿಗಳು ಜೈಕಾರ ಹಾಕಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಮೆರವಣಿಗೆ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ, ಹುಟ್ಟೂರಿಗೆ ಮರಳಿ ಬಂದಿರುವ ಬಗ್ಗೆ ಖುಷಿಯಿದೆ. ಬಳ್ಳಾರಿ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ನನಸಾಗಿಸುವ ದಿಸೆಯಲ್ಲಿ ಪ್ರಯತ್ನಿಸುತ್ತೇನೆ. 13 ವರ್ಷ ಬಳ್ಳಾರಿಯಿಂದ ದೂರ ಉಳಿದು ನೋವು ಅನುಭವಿಸಿದ್ದೇನೆ. ಬಳ್ಳಾರಿ ಅಭಿವೃದ್ಧಿಗೆ ದೇವರೇ ನನ್ನನ್ನು ಕಳಿಸಿಕೊಟ್ಟಿದ್ದಾನೆ ಎಂದರು.