ಅಸಂಸ್ಕೃತ ಪಕ್ಷಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಅಸಾಧ್ಯ: ಕೋಡಿಹಳ್ಳಿ ಚಂದ್ರಶೇಖರ್‌

KannadaprabhaNewsNetwork |  
Published : Mar 06, 2025, 12:30 AM IST
ಜನತಾ ಪ್ರಣಾಳಿಕೆಯ ಚರ್ಚೆ ಕಾರ್ಯಕ್ರಮವನ್ನು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗಬೇಕಾದರೆ ಕನ್ನಡ ನಾಡಿನ ಸ್ವಾಭಿಮಾನ ಮತ್ತು ಕನ್ನಡ ಜನತೆಯ ಸ್ವಾವಲಂಬನೆಗೆ ಬದ್ಧವಾದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಹಾವೇರಿ: ಅಸಂಸ್ಕೃತರಿಂದಲೇ ತುಂಬಿರುವ ಪಕ್ಷಗಳಿಂದ ಸುಸಂಸ್ಕೃತ ಸಮಾಜದ ನಿರ್ಮಾಣ ಅಸಾಧ್ಯ. ಅದಕ್ಕಾಗಿ ರಾಜ್ಯದಲ್ಲಿ ಎಂಬತ್ತರ ದಶಕದಲ್ಲಿ ವಿವಿಧ ಚಳವಳಿಗಳ ಭಾಗವಾಗಿ ಬೆಳೆದು ಬಂದಿರುವ ವಿವಿಧ ಸಂಘಟನೆಗಳು ಒಗ್ಗೂಡಿ ಪರ್ಯಾಯ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಉದ್ದೇಶಿಸಿವೆ. ಅದರ ಅಂಗವಾಗಿ ಕಳೆದ ತಿಂಗಳು ಬೆಂಗಳೂರಿನಲ್ಲಿ ಜನತಾ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿತ್ತು. ಈಗ ಪ್ರತಿ ಜಿಲ್ಲೆಗೂ ತೆರಳಿ ಜನರ ಮಧ್ಯೆ ಈ ಪ್ರಣಾಳಿಕೆ ಕುರಿತು ಚರ್ಚೆ, ಸಂವಾದ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಮಂಗಳವಾರ ಇಲ್ಲಿನ ಸಜ್ಜನರ ಫಂಕ್ಷನ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ- ಸ್ವಾವಲಂಬಿ ನವ ಕರ್ನಾಟಕ ನಿರ್ಮಾಣಕ್ಕೆ ಅಗತ್ಯವಾದ ಆಂದೋಲನದ ಬಗ್ಗೆ ಜನತೆಯ ನಡುವೆ ಜನತಾ ಪ್ರಣಾಳಿಕೆಯ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗಬೇಕಾದರೆ ಕನ್ನಡ ನಾಡಿನ ಸ್ವಾಭಿಮಾನ ಮತ್ತು ಕನ್ನಡ ಜನತೆಯ ಸ್ವಾವಲಂಬನೆಗೆ ಬದ್ಧವಾದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂಬ ನಿರ್ಧಾರಕ್ಕೆ ನಾಡಿನ ರೈತರು, ದಲಿತರು, ಕನ್ನಡಪರ ಹೋರಾಟಗಾರರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರ ಪ್ರತಿನಿಧಿಗಳು ಬಂದಿದ್ದಾರೆ ಎಂದರು.ಮುಖಂಡ ಗೋಪಿನಾಥ್ ಮಾತನಾಡಿ, ಮೊಘಲರ ಕಾಲದಿಂದಲೂ ಆಳರಸರು ಉಳ್ಳವರನ್ನು ಒಲೈಸುವ ನಿಟ್ಟಿನಲ್ಲಿ ಶೋಷಿತ ವರ್ಗವನ್ನು ಶೋಷಿಸುತ್ತಲೇ ಬಂದಿದ್ದಾರೆ. ಇದು ಬ್ರಿಟಿಷರ ಕಾಲದಲ್ಲೂ ಮುಂದುವರಿಯಿತು. ಸ್ವಾತಂತ್ರ್ಯ ನಂತರವೂ ಅದೇ ವ್ಯವಸ್ಥೆ ಮುಂದುವರಿದಿದೆ. ರೈತರು, ದಲಿತರು, ಅಲ್ಪಸಂಖ್ಯಾತರಾದ ಇಡಿಯಾಗಿ ಎಲ್ಲ ಶೋಷಿತರು ಅಧಿಕಾರವನ್ನು ನಮ್ಮ ಕೈಗೆ ತೆಗೆದುಕೊಳ್ಳದೇ ಈ ಸಮಾಜದಲ್ಲಿ ಬದಲಾವಣೆ, ಸುಧಾರಣೆ ಅಸಾಧ್ಯ ಎಂದರು.ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಅಶೋಕ ಮರಿಯಣ್ಣನವರ ಮಾತನಾಡಿ, ಶಿಕ್ಷಣ ಉಳ್ಳವರ ಸ್ವತ್ತಾಗಿದೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಕನಸಾಗಿದೆ. ನಮ್ಮೆಲ್ಲರ ಸಮಸ್ಯೆಗಳು ಪರಿಹಾರವಾಗಬೇಕಾದರೆ, ಕನ್ನಡ ನಾಡಿನ ಸ್ವಾಭಿಮಾನ ಮತ್ತು ಕನ್ನಡ ಜನತೆಯ ಸ್ವಾವಲಂಬನೆಗೆ ಬದ್ಧವಾದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂದರು.ವೇದಿಕೆಯಲ್ಲಿ ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ, ಚಂದ್ರಶೇಖರ ಪಾಟೀಲ, ಎಂ.ಎಂ. ನಾಯಕ, ಉಡಚಪ್ಪ ಮಾಳಗಿ, ರವೀಂದ್ರಗೌಡ ಪಾಟೀಲ, ವಿಜಯಕುಮರ ವಿರಕ್ತಮಠ, ಎಂ.ಕೆ. ಮಕಬೂಲ, ರಾಜಶೇಖರ ಉಪ್ಪಾರ, ಮಹಾದೇವಪ್ಪ ಮಾಳಮ್ಮನವರ, ಹನುಮಂತಪ್ಪ ಕಬ್ಬೇರ, ವಿಜಯಕುಮಾರ ಬೆನಕವಾಡಿ, ಎಸ್.ಎಸ್. ಹನಗೋಡಿಮಠ ಇತರರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ