ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಿ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಲು ಸಚಿವ ಬೋಸರಾಜ್ ಸಲಹೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷವನ್ನ ತಳ ಮಟ್ಟದಿಂದ ಸಂಘಟಿಸಿ ಗದ್ದುಗೆ ಹಿಡಿಯುವುದು ಅನಿವಾರ್ಯವೆಂದು ಸಣ್ಣನೀರಾವರಿ ಸಚಿವ ಬೋಸರಾಜ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದಕಾರ್ಯಕರ್ತರು, ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಾರ್ಚಿನಲ್ಲಿ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದ್ದು ಮುಖ್ಯಮಂತ್ರಿಗಳು 2025ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಇದಾದ ನಂತರ ಏಪ್ರಿಲ್ ತಿಂಗಳಲ್ಲಿ ಜಿಪಂ ತಾಪಂ ಚುನಾವಣೆಗಳು ಎದುರಾಗಲಿವೆ. ಈಗಾಗಲೇ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಲಾಗಿದೆ. ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಗಳ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯ ಎಲ್ಲರೂ ಹೊರಬೇಕೆಂದರು.
ಪಕ್ಷ ಇದ್ದರೆ ಮಾತ್ರ ಸರ್ಕಾರ ಬರುತ್ತದೆ. ಪಕ್ಷದಿಂದಲೇ ಅಧಿಕಾರ ಹಿಡಿಯಲು ಸಾಧ್ಯವಿದೆ. ಸರ್ಕಾರ ಇದ್ದಾಗ ಮಾತ್ರ ಎಲ್ಲಾ ರೀತಿಯ ಅಧಿಕಾರ ಅನುಭವಿಸಲು ಸಾಧ್ಯವಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಗೆಲುವಿಗೆ ಶ್ರಮಿಸಿದವರ ಗುರುತಿಸುವ ಕಾರ್ಯ ಮಾಡಿ ಅವರಿಗೆ ಸೂಕ್ತ ಸ್ಥಾನ ಕಲ್ಪಿಸಬೇಕಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಒಂದಾಗಿ ಸಂಘಟನೆಯಿಂದ ಕೆಲಸ ಮಾಡಿದಾಗ, ಪಕ್ಷವನ್ನು ಬೆಳಸಿದಾಗ ಮಾತ್ರ ಸರ್ಕಾರ ಬರಲು ಸಾಧ್ಯವಾಗುತ್ತದೆ ಎಂದರು.ದೇಶದಲ್ಲಿ ಸರ್ಕಾರ ಬರುವುದು ಹೋಗುವುದು ಸಾಮಾನ್ಯವಾಗಿದೆ. ಇಂದು ಅಧಿಕಾರದಲ್ಲಿದ್ದ ಪಕ್ಷ ಮುಂದಿನ ದಿನದಲ್ಲಿ ವಿರೋಧ ಪಕ್ಷವಾಗುತ್ತದೆ. ವಿರೋಧ ಪಕ್ಷವಾಗಿದ್ದ ಪಕ್ಷ ಅಡಳಿತ ಪಕ್ಷವಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದೆ. ಎಐಸಿಸಿ ಹಾಗೂ ಕೆಪಿಸಿಸಿ ಸಚಿವರಿಗೆ, ಅಧಿಕಾರದಲ್ಲಿ ಇದ್ದವರಿಗೆ ನಿರ್ದೆಶನ ನೀಡಿ ಪಕ್ಷ ಸಂಘಟಿಸುವಂತೆ ಸೂಚನೆ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಮಸ್ಯೆಯನ್ನು ಆಲಿಸುವ ಕಾರ್ಯರ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 5 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಇದಲ್ಲದೇ ಹಿರಿಯ ನಾಯಕರು ಸಹಾ ಜಿಲ್ಲೆಯಲ್ಲಿದ್ದಾರೆ. ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾದ ಸಕಾರಾತ್ಮಕವಾದ ಫಲಿತಾಂಶವನ್ನು ನೀಡಿದೆ. ಸರ್ಕಾರಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿದೆ. ಮ ಇಲಾಖೆಗೆ ಸಂಬಧಿಸಿದ ಯಾವುದೆ ಕೆಲಸಗಳು ಇದ್ದರೂ ತಮ್ಮ ಗಮನಕ್ಕೆ ತರುವಂತೆ ಬೋಸರಾಜ್ ಮನವಿ ಮಾಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷ ಜಯಸಿಂಹ ಮಾತನಾಡಿ, ಭೋಸೆರಾಜ್‍ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಾಗಿದ್ದು ಹೈದ್ರಾಬಾದ್ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಿ ಮುನ್ನೆಡೆಸಿದ್ದಾರೆ. ಹಲವಾರು ಮುಖಂಡರಿಗೆ ರಾಜಕೀಯ ಶಕ್ತಿಯಾಗಿ ನಿಂತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮುಖಂಡರಾದ ಬಿ.ಟಿ.ಜಗದೀಶ್, ಎನ್.ಡಿ.ಕುಮಾರ್, ಚೋಟು, ರವಿಕುಮಾರ್ ಮಧುಗೌಡ, ಖುದ್ದೂಸ್, ರಾಮ ಪ್ರಕಾಶ್, ಮುದಸಿರ್, ಪ್ರಕಾಶ್, ಅಲ್ಲಾ ಭಕ್ಷಿ ಇದ್ದರು.