ವಸಂತಕುಮಾರ್ ಕತಗಾಲ
ಕಾರವಾರ: ಕ್ರಿಮ್ಸ್ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಸರ್ಕಾರ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದು ಹಾಗಿರಲಿ, ಈಗ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಂದಲೂ ಎಕ್ಸ್‌ರೇ, ರಕ್ತ ಪರೀಕ್ಷೆ ಮೊದಲಾದ ವೈದ್ಯಕೀಯ ಪರೀಕ್ಷೆಗಳಿಗೆ ಶುಲ್ಕ ವಸೂಲಿ ಆರಂಭವಾಗಿದೆ. ಬಡವರು ಇನ್ನು ಮುಂದೆ ಯಾವುದೇ ಪರೀಕ್ಷೆ ಮಾಡಿಸುವುದಿದ್ದರೂ ಹಣ ತೆರಲೇಬೇಕು. ಜೊತೆಗೆ ಈ ಹಿಂದೆ ಇದ್ದ ಎಲ್ಲ ಶುಲ್ಕಗಳಲ್ಲಿ ಶೇ.25ರಷ್ಟು ಹೆಚ್ಚಳ ಮಾಡಲಾಗಿದೆ.ಈ ತನಕ ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿತ್ತು. ಈಗ ಯಾವುದೇ ಪರೀಕ್ಷೆ ಇರಲಿ, ಹೊರ ರೋಗಿಗಳು ನಿಗದಿತ ಶುಲ್ಕದ ಶೇ.50ರಷ್ಟನ್ನು ಬಿಪಿಎಲ್ ಕಾರ್ಡ್ ಇರುವ ರೋಗಿಗಳು ಭರಿಸಬೇಕು. ಎಪಿಎಲ್ ಕಾರ್ಡ್‌ನವರು ಪೂರ್ತಿ ಶುಲ್ಕವನ್ನು ನೀಡಬೇಕು. ಅಂದರೆ ಎಕ್ಸ್‌ರೇ ಮಾಡಿಸುವ ಬಿಪಿಎಲ್ ಕಾರ್ಡುದಾರರು ₹30 ನೀಡಬೇಕು. ಎಪಿಎಲ್ ಕಾರ್ಡ್‌ನವರು ₹60 ನೀಡಬೇಕು. ಇದರೊಂದಿಗೆ ಐಸಿಯು, ಸ್ಪೆಷಲ್ ರೂಂ ಹೀಗೆ ಎಲ್ಲ ಶುಲ್ಕಗಳಲ್ಲೂ ಶೇ.25ರಷ್ಟು ಹೆಚ್ಚಳ ಮಾಡಲಾಗಿದೆ.
ಒಂದು ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದಲ್ಲಿ ಮಾತ್ರ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉಚಿತ ಪರೀಕ್ಷೆ ಸೌಲಭ್ಯ ಪಡೆಯಬಹುದು ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ, ಆರ್ಥಿಕ ಸಮಿತಿ ಅಧ್ಯಕ್ಷರು ನಡೆಸಿದ ಸಭೆಯಲ್ಲಿ ಶುಲ್ಕ ಆಕರಣೆ ಹಾಗೂ ಶೇ.25ರಷ್ಟು ಶುಲ್ಕ ಪರಿಷ್ಕರಣೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು, ಈಗಿರುವ ಸೌಲಭ್ಯಗಳ ನಿರ್ವಹಣೆ ಮಾಡಲು ಸರ್ಕಾರ ಹಣ ನೀಡುತ್ತಿಲ್ಲ. ರೋಗಿಗಳಿಂದಲೇ ಶುಲ್ಕ ಪಡೆದು ಹೆಚ್ಚಿನ ಸೌಲಭ್ಯ ಕಲ್ಪಿಸಲು ಸೂಚಿಸಿದೆ. ಬೇರೆ ಬೇರೆ ಸ್ವಾಯತ್ತ ಮೆಡಿಕಲ್ ಕಾಲೇಜುಗಳಲ್ಲಿ ಈಗಾಗಲೆ ಪರೀಕ್ಷಾ ಶುಲ್ಕ ಆಕರಣೆ ಆರಂಭಗೊಂಡಿದೆ. ಮಂಗಳವಾರದಿಂದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಆಸ್ಪತ್ರೆಯಲ್ಲಿ ಶುಲ್ಕ ಪಡೆಯಲಾಗುತ್ತಿದೆ.ಸರ್ಕಾರದ ನಿರ್ಧಾರದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳ ಆಸ್ಪತ್ರೆಗಳಲ್ಲೂ ಶುಲ್ಕ ನಿಗದಿ ಪಡಿಸಲಾಗಿದೆ. ಬೇರೆ ಸಂಸ್ಥೆಗಳಲ್ಲಿ ಈ ಹಿಂದೆಯೇ ಶುಲ್ಕ ಪಡೆಯಲಾಗುತ್ತಿತ್ತು. ಇದೀಗ ಕಾರವಾರದಲ್ಲೂ ಆರಂಭವಾಗಿದೆ. ಈ ಹಣವನ್ನು ಆಸ್ಪತ್ರೆಯ ಅಭಿವೃದ್ಧಿ, ನಿರ್ವಹಣೆಗೆ ಬಳಸಲಾಗುತ್ತದೆ ಎನ್ನುತ್ತಾರೆ ಕ್ರಿಮ್ಸ್ ಡೀನ್ ಹಾಗೂ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ.