ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ದೇಶವೇ ಮೆಚ್ಚುವಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಇಂಥ ವ್ಯಕ್ತಿತ್ವವುಳ್ಳ ಅರಸು ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಪುಣ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ನಗರದ ವರನಟ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಮಹೋತ್ಸವದ ೫೦ನೇ ದಿನದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಹಾಗೂ ಕರ್ನಾಟಕದ ಮಾಜಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನನ್ನ ೪೦ ವರ್ಷಗಳ ರಾಜಕಾರಣದಲ್ಲಿ ಯಾವುದೇ ಪ್ರಶಸ್ತಿಯನ್ನು ನಾನು ಸ್ವೀಕರಿಸಿರುವುದಿಲ್ಲ. ಅಂಥ ಕಾರ್ಯಕ್ರಮಗಳಿಗೂ ನಾನು ಹೋಗುವುದಿಲ್ಲ. ಅದರೆ, ಸಚಿವ ಕೆ.ವೆಂಕಟೇಶ್ ಅರಸು ಪ್ರಶಸ್ತಿಯನ್ನು ನನಗೆ ನೀಡುವಂತೆ ಶಿಫಾರಸ್ಸು ಮಾಡಿ, ನನ್ನನ್ನು ಗೊಂದಲಕ್ಕೆ ಸಿಲುಕಿಸಿದರು ಎಂದರು.
ರಾಜ್ಯ ಕಂಡ ಅಪ್ರತಿಮ ಆಡಳಿತಗಾರರಾಗಿದ್ದ ಡಿ.ದೇವರಾಜ ಅರಸು ಮುತ್ಸದ್ದಿ ರಾಜಕಾರಣಿ. ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಯನ್ನು ನೀಡಿದವರು. ಇಂಥ ರಾಜಕಾರಣಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಇಂಥ ಮೇರು ನಾಯಕರು, ಬುದ್ದ, ಬಸವ, ಅಂಬೇಡ್ಕರ್, ಲೋಹಿಯಾ ಹಾದಿಯಲ್ಲಿ ಅವರ ತತ್ವದಡಿಯಲ್ಲಿ ರಾಜಕಾರಣ ಮಾಡಿದ ಸಜ್ಜನರು. ಹಿಂದುಳಿದ ವರ್ಗ, ದೀನ ದಲಿತರ ಪರವಾಗಿ ನಿಂತವರು. ಇಂಥವರು ನಮ್ಮಂಥ ರಾಜಕಾರಣಿಗಳಿಗೆ ಮಾರ್ಗದರ್ಶಕರು ಎಂದು ಸ್ಮರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇವರಾಜ ಅರಸು ಅತ್ಯಂತ ಯಶಸ್ವಿ ಮುಖ್ಯಮಂತ್ರಿಯಾಗಿದ್ದರು. ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಅಂಥ ಮಹಾನ್ ಚೇತನದ ಹೆಸರಿನಲ್ಲಿ ನನ್ನ ಸ್ನೇಹಿತರಾದ ಮಹದೇವಪ್ಪರಿಗೆ ಪ್ರಶಸ್ತಿ ನೀಡುತ್ತಿರುವುದು ತುಂಬ ಖುಷಿಯಾಗಿದೆ. ದೇವರಾಜ ಅರಸು ಹಾದಿಯಲ್ಲಿಯೇ ಮಹದೇವಪ್ಪ ರಾಜಕಾರಣ ಮಾಡುತ್ತಿದ್ದಾರೆ. ಅವರ ಸೇವೆ ಅನನ್ಯ ಎಂದರು.ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ದೇವರಾಜ ಅರಸು ಪ್ರಶಸ್ತಿಯನ್ನು ಮಹದೇವಪ್ಪ ಅವರಿಗೆ ನೀಡುತ್ತಿರುವುದರಿಂದ ಆ ಪ್ರಶಸ್ತಿಗೂ ಮತ್ತು ಅವರಿಗೂ ಗೌರವ ಬಂದಿದೆ. ದೇವರಾಜ ಅರಸು ಅವರನ್ನು ನಾನು ಬಹಳ ಹತ್ತಿರದಿಂದ ಬಲ್ಲವನು. ರಾಜಕಾರಣದಲ್ಲಿ ಶುದ್ದ ಹಸ್ತರು, ಉತ್ತಮ ಆಡಳಿತಗಾರರು ಆಗಿದ್ದರು. ಅವರು ನೇರ ನಡೆ-ನುಡಿ ಅವರನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು. ಅವರಿಗೆ ಆರೋಗ್ಯ ಸ್ಥಿತಿ ಉತ್ತಮವಾಗಿದ್ದರೆ, ಪ್ರಧಾನಿಯಾಗುವ ಎಲ್ಲ ಅರ್ಹತೆಯು ಇತ್ತು ಎಂದರು. ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಾಟಾಳ್ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್ತು ಸದಸ್ಯರಾದ ಮಂಜೇಗೌಡ, ಡಾ.ತಿಮ್ಮಯ್ಯ, ಚಾ.ನಗರ ವಿವಿ ಉಪಕುಲಪತಿ ಎಂ.ಆರ್. ಗಂಗಾಧರ್, ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಆರ್.ನರೇಂದ್ರ, ನಗರಸಭಾಧ್ಯಕ್ಷ ಸುರೇಶ್, ಚೂಡಾಧ್ಯಕ್ಷ. ಮಹಮ್ಮದ್ ಅಸ್ಗರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ.ಕವಿತಾ, ಜಿಪಂ ಸಿಇಒ ಮೋನಾರೋತ್, ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಪಂ ಮಾಜಿ ನವೀನ್ ಕೆರೆಹಳ್ಳಿ, ಆಲೂರು ಪ್ರದೀಪ್, ನಿಜಧ್ವನಿ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ಜಗದೀಶ್ ಮೊದಲಾದವರು ಇದ್ದರು.