ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ನಿಯಂತ್ರಣ ಅಗತ್ಯ: ಎ.ಬಿ. ಬಸವರಾಜು

KannadaprabhaNewsNetwork | Published : Mar 15, 2025 1:04 AM

ಸಾರಾಂಶ

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡು ಬಂದ ಕೂಡಲೇ ಕಾಯ್ದೆಯಡಿ ಶೀಘ್ರ ಎಫ್ಐಆರ್ ದಾಖಲಿಸಿ, ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ತನಿಖೆಗೆ ಒಳಪಡಿಸಿಬೇಕು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಪರಿಶಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರದ ಜೊತೆಗೆ ಶೀಘ್ರ ನ್ಯಾಯ ದೊರಕಿಸುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2025 ನೇ ಸಾಲಿನ ಮೊದಲನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ, ಪಿಇಎಂಎಸ್ ಮತ್ತು ಆರ್ ಕಾಯ್ದೆ-2013ರ ಸಮಿತಿ ಸಭೆ ಹಾಗೂ ಎಸ್.ಸಿ.ಪಿ -ಟಿ.ಎಸ್.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡು ಬಂದ ಕೂಡಲೇ ಕಾಯ್ದೆಯಡಿ ಶೀಘ್ರ ಎಫ್ಐಆರ್ ದಾಖಲಿಸಿ, ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ತನಿಖೆಗೆ ಒಳಪಡಿಸಿಬೇಕು. ಪ್ರಕರಣಗಳ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡುವುದರ ಮೂಲಕ ಸಕಾಲದಲ್ಲಿ ಸಂತ್ರಸ್ತರಿಗೆ ಪರಿಹಾರ ಧನ ನೀಡಬೇಕು. ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ, ಚಾರ್ಜ್ ಶೀಟ್ ಅಥವಾ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು. ಬೇಗ ನ್ಯಾಯ ಸಿಕ್ಕಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿ ದೌರ್ಜನ್ಯ ಪ್ರಕರಣಗಳು ಮರುಕಳಿಸುವುದನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ತಾಲೂಕುಗಳಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ, ಉಪವಿಭಾಗ ಮಟ್ಟದ ಸಭೆಯನ್ನು ಕಡ್ಡಾಯವಾಗಿ ನಡೆಸಿ ತಾಲ್ಲೂಕು ಮಟ್ಟದ, ಉಪವಿಭಾಗ ಮಟ್ಟದ ಕುಂದು ಕೊರತೆಗಳನ್ನು, ಸ್ಥಳೀಯ ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿಯೇ ಬಗೆಹರಿಸಿ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

6 ದೌರ್ಜನ್ಯ ಪ್ರಕರಣಗಳು ದಾಖಲು:

ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿದ ಅವರು ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 6 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 06 ಪ್ರಕರಣಗಳಲ್ಲಿ ನೊಂದ 09 ಸಂತ್ರಸ್ತರಿಗೆ ಒಟ್ಟು 6.38 ಲಕ್ಷ ರೂ.ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಪೊಲೀಸ್ ಠಾಣೆಗಳಲ್ಲಿ, ತಾಲೂಕು ಹಂತದಲ್ಲಿ ನಡೆಯುವ ಕುಂದು ಕೊರತೆ ಸಭೆಗಳಿಗೆ ಸಮಿತಿ ಸದಸ್ಯರನ್ನು ಆಹ್ವಾನಿಸಬೇಕು ಎಂದರು.

ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಮೂಡಿಸಿ:

ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಜೊತೆಗೆ ಆರೋಗ್ಯ ಕಾಳಜಿ ಮುಖ್ಯ, ಕೆಲಸದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೈ-ಕಾಲಿಗೆ ಗ್ಲೌಸ್, ರಕ್ಷಣಾತ್ಮಕ ಬಟ್ಟೆ ಧರಿಸುವುದರ ಬಗ್ಗೆ ಅರಿವಿರುವುದಿಲ್ಲ. ಪ್ರತಿ ತಿಂಗಳು ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ ಹಾಗೂ ಕೆಲಸದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಗಾರ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದು ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರೇಮಾ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನರೇಂದ್ರ ಬಾಬು, ಕೃಷಿ ಇಲಾಖೆ ಉಪನಿರ್ದೇಶಕಿ ಗಾಯಿತ್ರಿ, ತೋಟಗಾರಿಕೆ ಉಪನಿರ್ದೇಶಕ ಗುಣವಂತ, ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.

ಫೋಟೋ-14ಕೆಡಿಬಿಪಿ1- ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಪರಿಶಿಷ್ಟ ಸಮುದಾಯದ ಯೋಗನೆಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

Share this article