ತಂತ್ರಜ್ಞಾನದ ಬಳಕೆಯೊಂದಿಗೆ ಬೆಳೆ ಬೆಳೆಯುವುದು ಅಗತ್ಯ

KannadaprabhaNewsNetwork |  
Published : Feb 14, 2025, 12:33 AM IST
ಅವಲೋಕನ ಸಭೆ ನಡೆಯಿತು | Kannada Prabha

ಸಾರಾಂಶ

ಸಾಗರ: ಎಲ್ಲ ಕ್ಷೇತ್ರದಂತೆ ಕೃಷಿಯಲ್ಲೂ ಸಮಸ್ಯೆಗಳಿದ್ದರೂ ಅವುಗಳ ನಡುವೆಯೇ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಬಳಕೆಯೊಂದಿಗೆ ಬೆಳೆ ಬೆಳೆಯುವುದು ಪ್ರಸ್ತುತದ ಅಗತ್ಯವಾಗಿದೆ ಎಂದು ಪ್ರಗತಿಪರ ಕೃಷಿಕ ಮಹೇಶ ಕಟ್ಟಿನಕೆರೆ ಅಭಿಪ್ರಾಯಪಟ್ಟರು.

ಸಾಗರ: ಎಲ್ಲ ಕ್ಷೇತ್ರದಂತೆ ಕೃಷಿಯಲ್ಲೂ ಸಮಸ್ಯೆಗಳಿದ್ದರೂ ಅವುಗಳ ನಡುವೆಯೇ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಬಳಕೆಯೊಂದಿಗೆ ಬೆಳೆ ಬೆಳೆಯುವುದು ಪ್ರಸ್ತುತದ ಅಗತ್ಯವಾಗಿದೆ ಎಂದು ಪ್ರಗತಿಪರ ಕೃಷಿಕ ಮಹೇಶ ಕಟ್ಟಿನಕೆರೆ ಅಭಿಪ್ರಾಯಪಟ್ಟರು.

ಪಟ್ಟಣದ ಬ್ರಾಸಂ ಸಭಾಂಗಣದಲ್ಲಿ ಶ್ರೀ ವರದಾ ಸಿರಿ ಕೃಷಿ ಬಳಗ ಆಯೋಜಿಸಿದ್ದ ಕೃಷಿ ಬದುಕು ಮತ್ತು ಯುವ ಜನರು ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

ನಮಗೆ ಎಷ್ಟು ಜಾಗವಿದೆ ಎನ್ನುವುದಕ್ಕಿಂತ ಅದರಲ್ಲಿ ಎಷ್ಟು ಬೆಳೆ ಬೆಳೆಯುತ್ತಿದ್ದೇವೆ ಎನ್ನುವುದು ಮುಖ್ಯ. ಜಮೀನಿನ ಒಂದಿಂಚೂ ಖಾಲಿ ಬಿಡದಂತೆ ವ್ಯವಸ್ಥಿತ ಆದಾಯ ಬರುವ ರೀತಿಯಲ್ಲಿ ಕೃಷಿ ಮಾಡುವುದನ್ನು ಯುವಕರು ಅಭ್ಯಾಸ ಮಾಡಬೇಕಿದೆ ಎಂದು ಹೇಳಿದರು.ಕೇವಲ ಅಡಕೆ ಬೆಳೆಗೆ ಮಾತ್ರ ಅಂಟಿಕೊಳ್ಳದೆ ಶುಂಠಿ, ಕಾಳುಮೆಣಸು, ಅರಿಶಿನ, ಏಲಕ್ಕಿ, ಅನಾನಸ್, ಕಾಫಿ, ಬಾಳೆ, ಮಾವು, ಗೇರು, ತೆಂಗು, ಹಲಸು ಹೀಗೆ ವೈವಿಧ್ಯಮಯ ಬೆಳೆ ಬೆಳೆಯುವುದರಿಂದ ಕೃಷಿಯಲ್ಲಿ ನಿರಂತರ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಜೊತೆಯಲ್ಲಿ ಜೇನುಕೃಷಿ ಮಾಡುವುದು ರೈತರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವುದಲ್ಲದೆ ಆರ್ಥಿಕ ಸುಸ್ಥಿರತೆಗೂ ನಾಂದಿಯಾಗುತ್ತದೆ ಎಂದರು.ಹಿರಿಯ ಪ್ರಗತಿಪರ ಕೃಷಿಕ ಕಟ್ಟಿನಕೆರೆ ಸೀತಾರಾಮ ಮಾತನಾಡಿ, ಡಿವಿಜಿ ಹೇಳಿದ ಹೊಸ ಬೇರು ಹಳೆ ಚಿಗುರು ಕೂಡಿರಲು ಮರ ಸೊಬಗು ಎಂಬ ಮಾತಿನಂತೆ ನಾವು ಯುವ ಸಮುದಾಯವನ್ನೂ ಸೇರಿಸಿಕೊಂಡು ಕೃಷಿಯನ್ನು ಉಳಿಸಿ ಲಾಭದಾಯಕವಾಗಿ ಮಾಡಬೇಕಿದೆ. ಕೃಷಿ ಸಂಬಂಧಿ ಪುಸ್ತಕ ಓದು, ಕೃಷಿ ಜಮೀನಿನ ತಿರುಗಾಟ, ಹಿರಿಯರಿಂದ ಮಾಹಿತಿ ಪಡೆಯುವುದು, ನೋಡಿ ಕಲಿಯುವುದು ಎಲ್ಲವೂ ಸೇರಿಕೊಂಡು ತಪಸ್ಸಿನಂತೆ ಕೃಷಿಯನ್ನು ಮಾಡುವುದು ಮತ್ತು ಹೊಸ ವಿಧಾನ ಬಳಕೆ, ಶ್ರಮ, ಅಳವಡಿಸಿಕೊಂಡಾಗ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಘಟನೆ ಮಾಡುವುದು ಹೇಗೆ ಎಂಬ ವಿಷಯದ ಕುರಿತು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕ ಮಾತನಾಡಿದರು. ಲಾಭದಾಯಕವಾಗಿ ಮೆಣಸಿನ ಕೃಷಿ ಮಾಡುವ ಕುರಿತು ಕಿಬ್ಬಚ್ಚಲು ವಿನಾಯಕ ಮಾಹಿತಿ ನೀಡಿದರು. ಶ್ರೀ ವರದಾ ಸಿರಿ ಕೃಷಿ ಬಳಗದ ಅಧ್ಯಕ್ಷ ವಿ.ಜಿ. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ದೇವಕಮ್ಮ ಹೊಸಬಾಳೆ, ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಸತೀಶ್ ಲಿಂಗದಹಳ್ಳಿ, ಮಡಸೂರು ಶ್ರೀಪಾದ, ಜ್ಯೋತಿ ಮಹೇಶ್, ಸಮರ್ಥ ಚಿಪ್ಳಿ, ಸಂತೋಷ ಶೆಡ್ತೀಕೆರೆ, ಬೆನಕ, ಮನು ಕಲ್ಮನೆ, ಶ್ರೀನಿಧಿ ಕಲ್ಮನೆ ಮುಂತಾದವರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ