ಕನ್ನಡ ಸಂಸ್ಕೃತಿಯ ಹೃದಯಸ್ಥವಾಗಿಸಿಕೊಳ್ಳುವುದು ಅಗತ್ಯ

KannadaprabhaNewsNetwork |  
Published : Nov 17, 2025, 02:15 AM IST
ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪೋಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭಾರತೀಯ ಪರಂಪರೆಯಲ್ಲಿ ಕನ್ನಡಕ್ಕೆ ವಿಶಿಷ್ಟ ಸ್ಥಾನವಿದ್ದು, ಇಲ್ಲಿನ ಸಂಸ್ಕೃತಿಯ ಹೃದಯಸ್ಥವಾಗಿಸಿಕೊಳ್ಳುವುದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ಕುವೆಂಪು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಸಿದ್ದೇಶ್ ಹೇಳಿದರು.

ಚಿತ್ರದುರ್ಗ: ಭಾರತೀಯ ಪರಂಪರೆಯಲ್ಲಿ ಕನ್ನಡಕ್ಕೆ ವಿಶಿಷ್ಟ ಸ್ಥಾನವಿದ್ದು, ಇಲ್ಲಿನ ಸಂಸ್ಕೃತಿಯ ಹೃದಯಸ್ಥವಾಗಿಸಿಕೊಳ್ಳುವುದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ಕುವೆಂಪು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಸಿದ್ದೇಶ್ ಹೇಳಿದರು.ಇಲ್ಲಿನ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹನುಮಶಕ್ತಿಯ ನೆಲೆಯಾದ ಕರ್ನಾಟಕ ಪ್ರವಾಸಿಗರಿಗೆ ಸ್ವರ್ಗ. ಬ್ರಿಟೀಷರ ಆಡಳಿತ ಅವಧಿಯಲ್ಲಿ 20 ಕನ್ನಡ ಪ್ರದೇಶಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವ ಏಕೀಕರಣಗೊಳಿಸಿ ಕರ್ನಾಟಕವನ್ನಾಗಿಸಿದ ದಿನವನ್ನು ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ಕನ್ನಡದ ನೆಲ, ಜಲ, ಭಾಷೆ, ಜನರಿಗಾಗಿ ಶ್ರಮಿಸಿದವರ ನೆನೆಯುವುದು ನಮ್ಮ ಕರ್ತವ್ಯವಾಗಬೇಕೆಂದರು.

ಚಿತ್ರದುರ್ಗದ ಬಗ್ಗೆ ತಾವೇ ರಚಿಸಿದ ನೋಡು ಬಾ ಚಿತ್ರದುರ್ಗವ ಎಂಬ ಪದ್ಯ ವಾಚಿಸಿದ ಅವರು, ಜೀವನದಲ್ಲಿ ಒಮ್ಮೆಯಾದರೂ ನಮ್ಮ ಉಕ್ಕಿನ ಕೊಟೆ ಚಿತ್ರದುರ್ಗವನ್ನು ನೋಡಬೇಕು. ಇಲ್ಲಿನ ಐತಿಹಾಸಿಕ ಪಳೆಯುಳಿಕೆಗಳು ವೀರತನವನ್ನು ಸಾರುತ್ತದೆ. ಕೋಟೆ ರಕ್ಷಿಸುವಲ್ಲಿ ಒನಕೆ ಓಬವ್ವಳ ಶೌರ್ಯ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು. ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಕನ್ನಡ ನೆಲದ ಸಂಸ್ಕೃತಿ ಇಲ್ಲಿನ ಬದುಕು ಅರಿಯಬೇಕಾದರೆ ಕುವೆಂಪು ಅವರ ನಾಡಗೀತೆ ಹಾಗೂ ರೈತ ಗೀತೆಯ ವಿದ್ಯಾರ್ಥಿಗಳು ಓದಿ ಮನನ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಮಾತೃಭಾಷೆಯಿಂದ ಮಾತ್ರ ಬದುಕು ಕಟ್ಟಿಕೊಡಲು ಸಾಧ್ಯವಾಗಿದೆ ಎಂದರು.ಪೋಷಕರ ಕಣ್ಣುಗಳಲ್ಲಿ ಮಗ ಇಲ್ಲವೇ ಮಗಳು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂಬ ಬಹು ದೊಡ್ಡ ಕನಸು ಇಟ್ಟುಕೊಂಡಿರುತ್ತಾರೆ. ಕನಸು ಸಾಕಾರಕ್ಕಾಗಿ ತಮ್ಮ ಇಡೀ ಜೀವಮಾನವನ್ನೇ ಸವೆಸುತ್ತಾರೆ. ವಿದ್ಯಾರ್ಥಿಗಳು ತಂದೆ ತಾಯಿಯರ ಕಾಳಜಿಗಳ ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಎಂಜಿನಿಯರ್ ಹಾಗೂ ಡಾಕ್ಟರ್ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನವ ವ್ಯರ್ಥ ಮಾಡದೆ ಸಾರ್ಥಕಗೊಳಿಸಿಕೊಳ್ಳಬೇಕು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಪಡೆಯಲು ನಿತ್ಯ ಪತ್ರಿಕೆಗಳ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆ ಬರೆಯಲು ಪತ್ರಿಕೆಗಳ ಓದು ಸಹಕಾರಿಯಾಗುತ್ತದೆ ಎಂದರು.ಐಸಿಎಸ್‌ಇ ಪ್ರಾಚಾರ್ಯ ಬಸವರಾಜಯ್ಯ ಮಾತನಾಡಿ, ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ ಎಂಬ ಶ್ಲೋಕದಂತೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲು. ಸದಾ ಪೂಜ್ಯನೀಯವಾದದು ನಾವು ಅದಕ್ಕೆ ತುಂಬಾ ಗೌರವವನ್ನು ಕೊಡಬೇಕು ಎಂದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಂ.ಪೃಥ್ವೀಶ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಕನ್ನಡ ಭಾಷೆ ಮತ್ತು ನೆಲಕ್ಕೆ ನಾವು ಏನು ಕೊಡುಗೆ ಕೊಡುತ್ತೇವೆ ಎಂಬುದ ಯೋಚಿಸಬೇಕು. ಸಾಧನೆ ಮಾಡಲು ಯಾವುದೇ ಒಂದು ರಂಗ ಮಾತ್ರ ಸೀಮಿತವಾಲ್ಲ. ಆಯ್ಕೆ ನಿಮ್ಮ ಮುಂದಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಮೊದಲು ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವನ್ನು ಬೆಳಸಿಕೊಳ್ಳಬೇಕೆಂದರು. ಮುಖ್ಯೋಪಾಧ್ಯಾಯ ಎನ್.ಜಿ.ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದಾಗಿಸಿದ ಸುದಿನವ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಇದೇ ದಿನ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಬಿ.ವಿಜಯ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ದೂರ ಮಾಡಿ ಕನ್ನಡ ಪತ್ರಿಕೆಗಳ ಓದುವ ಅಭ್ಯಾಸ ರೂಢಿಮಾಡಿಕೊಳ್ಳಬೇಕೆಂದರು. .2024-25ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಕನ್ನಡ ಮಾಣಿಕ್ಯ ಬಿರುದು ನೀಡಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಿಕ್ಷಕರಿಗೆ ಆಯೋಜಿಸಿದ್ದ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಜಾನವಿ ಸ್ವಾಗತಿಸಿದರು, ಉಷಾ ಮತ್ತು ಸಿರಿಗೌರಿ ಪಿ.ಶೆಟ್ಟಿ ನಿರೂಪಿಸಿದರು, ದೀಕ್ಷಿತಾ.ಎಂ ವಂದಿಸಿದರು. ಸಂಸ್ಥೆ ನಿರ್ದೇಶಕಿ ಸುನೀತಾ.ಪಿ.ಸಿ ಉಪಸ್ಥಿತರಿದ್ದರು.

PREV

Recommended Stories

ಸಹಕಾರಿ ರಂಗದ ಸಾಧನೆಗೆ ಸಂಘಟಿತ ಪ್ರಯತ್ನ ಅಗತ್ಯ: ಜಾಸ್ಮಿನ್ ಕಿಲ್ಲೆದಾರ
ಮೋದಿ ಅಭಿವೃದ್ಧಿಗೆ ಜನ ಬೆಂಬಲ: ಸುನಿಲ್‌ ಕುಮಾರ್‌