ಸವಣೂರು: ಇಂದಿನ ಕಾಲದಲ್ಲಿ ಶಿಕ್ಷಣ ಅತ್ಯವಶ್ಯವಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನಾವು ಸರಕಾರಿ ಶಾಲೆಗಳನ್ನು ಮುಚ್ಚದಂತೆ ರಕ್ಷಿಸುವುದು ಅಗತ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ತಾಲೂಕಿನ ಹೊಸ ನೀರಲಗಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಕೇವಲ 40 ಮಕ್ಕಳಿದ್ದಲ್ಲಿ, ಶಾಲೆಯನ್ನು ಮುಚ್ಚಲಾಗುತ್ತದೆ ಅಥವಾ ಬೇರೆಡೆ ಮಕ್ಕಳನ್ನು ವರ್ಗಾಯಿಸಲಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಸರಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಿದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಂಡಾಗ ಮಾತ್ರ ಗ್ರಾಮೀಣ ಭಾಗದ ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸಾಧ್ಯವಾಗಲಿದೆ. ಶಾಲೆಯಲ್ಲಿ ಒಂದೇ ಮಗು ಇದ್ದರೂ ಕೂಡಾ ಒಬ್ಬ ಶಿಕ್ಷಕ ಬೋಧಿಸಲು ಇದ್ದಲ್ಲಿ ಮಾತ್ರ ನಾವು ದೇಶವನ್ನು ಬೆಳೆಸಲು ಸಾಧ್ಯ ಎಂಬ ಚಿಂತನೆ ಇರಬೇಕು, ಗ್ರಾಮದ ದಾನಿಗಳೂ ಸಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ದೂರದೃಷ್ಟಿಯನ್ನು ಇಟ್ಟುಕೊಂಡು ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವುದು ಶ್ಲಾಘನೀಯ. ಈ ಗ್ರಾಮದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು. ಈ ಶಾಲೆ ಇದೇ ರೀತಿ ಉನ್ನತಿ ಹೊಂದುವ ಮೂಲಕ ಇಲ್ಲಿಯ ಮಕ್ಕಳು ಕೂಡಾ ರಾಜ್ಯ ಮಟ್ಟಕ್ಕೆ, ರಾಜ್ಯದಿಂದ ವಿದೇಶಕ್ಕೆ ತೆರಳುವ ರೀತಿಯ ಶಿಕ್ಷಣ ಈ ಗ್ರಾಮದಲ್ಲಿ ಸಿಗುವಂತಾಗಲಿ, ನಾವೆಲ್ಲರೂ ಸಮಾನತೆಯಿಂದ ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಅವಶ್ಯವಿದೆ. ಅದೇ ರೀತಿ ನಾನು ಸಹ ಒಂದು ಲಕ್ಷ ರುಪಾಯಿಗಳನ್ನು ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು, 75ನೇ ವರ್ಷದ ಲಾಂಛನವನ್ನು ಅನಾವರಣಗೊಳಿಸಿದ ಶಾಸಕ ಯಾಸೀರ ಅಹ್ಮದಖಾನ ಪಠಾಣ ಮಾತನಾಡಿ, ಈ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲು ಲೋಕೋಪಯೋಗಿ ಸಚಿವರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಕ್ಷೇತ್ರವನ್ನು ದತ್ತುಪಡೆದುಕೊಂಡಿದ್ದಾರೆ. ಗ್ರಾಮದ ದಾನಿಗಳ ಸಹಕಾರವೊಂದಿದ್ದರೆ, ಗ್ರಾಮಕ್ಕೆ ಕೆಪಿಎಸ್ ಶಾಲೆ ತರುವುದರ ಮೂಲಕ ಈ ಗ್ರಾಮವನ್ನು ಕ್ಷೇತ್ರದಲ್ಲಿಯೇ ಮಾದರಿ ಗ್ರಾಮವನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಹೆಸ್ಕಾಂ ಅಧ್ಯಕ್ಷ ಸೈಯದ ಅಜೀಂಪೀರ ಖಾದ್ರಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿದರು. ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದ ಕಾಗಿನೆಲೆ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ರಾಣೆಬೆನ್ನೂರ ಶನೇಶ್ವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಧಾನಗುರು ಎಸ್.ಟಿ. ಮಹಾಪುರುಷ್ ಅಮೃತ ಮಹೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ರಾಜ್ಯ ಉಪಾಧ್ಯಕ್ಷ ಸುನೀಲ ಹನುಮಣ್ಣನವರ, ಜಿ.ಪಂ. ಮಾಜಿ ಸದಸ್ಯ ಶಿವರಾಜ ಅಮರಾಪೂರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಜೆ. ಮುಲ್ಲಾ, ತಹಸೀಲ್ದಾರ್ ರವಿಕುಮಾರ ಕೊರವರ, ಆರಕ್ಷಕ ನಿರೀಕ್ಷಕ ತಿಮ್ಮಣ್ಣ ಚಾಮನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಕೆಡಿಪಿ ಸದಸ್ಯ ರವಿ ಕರಿಗಾರ, ಪ್ರಮುಖರಾದ ನಿಂಗಪ್ಪ ಹಳವಳ್ಳಿ, ಕಾಂತೇಶ ವಾಲ್ಮೀಕಿ, ನಾಗರಾಜ ವಾಲ್ಮೀಕಿ, ಮಹಾಂತೇಶ ಸಾಲಿ ಸೇರಿದಂತೆ ಗ್ರಾಮದ ಹಿರಿಯರು, ಭೂದಾನಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.