ಕಸ್ತೂರಿ ರಂಗನ್‌ ವರದಿ ತಿರಸ್ಕರಿಸುವುದು ಅಗತ್ಯ: ಜಿಲ್ಲಾ ಉಸ್ತುವರಿ ಸಚಿವ ಕೆ.ಎಂ ಶಿವಲಿಂಗೇಗೌಡ

KannadaprabhaNewsNetwork |  
Published : Sep 21, 2026, 01:45 AM IST
20ಎಚ್ಎಸ್ಎನ್8 :  | Kannada Prabha

ಸಾರಾಂಶ

ಕಸ್ತೂರಿರಂಗನ್ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಮಲೆನಾಡಿನ ಜನರಿಂದ ಪರಿಸರಕ್ಕೆ ಎಂದಿಗೂ ಹಾನಿ ಉಂಟಾಗುವುದಿಲ್ಲ. ಮಲೆನಾಡಿಗರಿಂದಲೇ ಇದುವರೆಗೆ ಪಶ್ಚಿಮಘಟ್ಟ ಉಳಿದಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರವನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಬೇಕು.

ಕನ್ನಡಪ್ರಭವಾರ್ತೆ, ಸಕಲೇಶಪುರ

ಕಸ್ತೂರಿರಂಗನ್ ವರದಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕುಟುಂಬಗಳನ್ನು ಬುಡಮೇಲು ಮಾಡುತ್ತಿದೆ. ಆದ್ದರಿಂದ ಈ ವರದಿ ತಿರಸ್ಕರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಬೇಕು ಎಂದು ಹಾಸನ ಜಿಲ್ಲಾ ಉಸ್ತುವರಿ ಸಚಿವ ಕೆ.ಎಂ ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.

ಪಟ್ಟಣದ ಎಪಿಎಂಸಿ ಅವರಣದಲ್ಲಿ ಭಾನುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆ ಹಾಗೂ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿ, ಸಮಸ್ಯೆ ಅಲಿಸಲು ಸರ್ಕಾರವೇ ಜನರ ಬಳಿ ಬಂದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸತು. ಕಸ್ತೂರಿರಂಗನ್‌ ವರದಿ ಸಮಸ್ಯೆ ಬಾಧಿತ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಪ್ರವಾಸ ನಡೆಸಿದ ವೇಳೆ ಅಭೂತ ಪೂರ್ವ ಸ್ವಾಗತ ದೊರೆತಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಉತ್ಸಾಹ ಮೂಡಿಸಿದೆ. ಉಪಗ್ರಹ ಆಧಾರಿತ ಚಿತ್ರದಿಂದ ವರದಿ ಸಿದ್ಧಪಡಿಸಿರುವುದು ತೀರಾ ಅವೈಜ್ಞಾನಿಕ. ಅರಣ್ಯ ಬೆಳಸಲು ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಲಿ. ಇದನ್ನು ಹೊರತುಪಡಿಸಿ ಜನರ ಜೀವನಾಡಿಯನ್ನೆ ಕಿತ್ತುಕೊಳ್ಳುವಂತ ಇಂತಹ ವರದಿ ಜಾರಿಗೊಳಿಸುವುದು ಶೋಭೆಯಲ್ಲ. ಪಶ್ಚಿಮಘಟ್ಟ ದಂಚಿನಲ್ಲಿರುವ ಜನರು ನಿಜವಾಗಿ ಅರಣ್ಯ ರಕ್ಷಕರು. ಇಂತಹವರನ್ನು ಹೊರಹಾಕಲು ಹೊರಟಿರುವುದು ತೀರಾ ನಾಚೀಕೆಗೆಡು ಎಂದು ಅವರು ಅಭಿಪ್ರಾಯಪಟ್ಟರು. ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಮಲೆನಾಡಿನ ಜನರಿಂದ ಪರಿಸರಕ್ಕೆ ಎಂದಿಗೂ ಹಾನಿ ಉಂಟಾಗುವುದಿಲ್ಲ. ಮಲೆನಾಡಿಗರಿಂದಲೇ ಇದುವರೆಗೆ ಪಶ್ಚಿಮಘಟ್ಟ ಉಳಿದಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರವನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಜ್ವಲಂತ ಸಮಸ್ಯೆಗಳ ತಾಂಡವ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸೀಮೆಂಟ್ ಮಂಜು ಮಾತನಾಡಿ, ಈಗಾಗಲೇ ಕ್ಷೇತ್ರದ ಜನರು ಅರಣ್ಯಇಲಾಖೆಯ ವಿವಿಧ ಕಾನೂನಿನಿಂದ ನೊಂದು ಹೋಗಿದ್ದಾರೆ. ಕಸ್ತೂರಿರಂಗನ್ ವರದಿ ತಂದರೆ ಜನರ ಪರಿಸ್ಥಿತಿ ತೀರ ಹದಗೆಡಲಿದೆ. ತಾಲೂಕಿನಲ್ಲಿ ನೂರಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಸಮಸ್ಯೆಗಳ ನಡುವೆ ಜನರು ಬದುಕು ನಡೆಸುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡ ಜನರಿಗೆ ಮರಣಶಾಸನ ಬರೆದಂತೆ. ಮಲೆನಾಡಿನಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದ ಕಾರಣ ಜನರು ಈಗಲೇ ಬೆಳೆಗಳಿಗೆ ಹನಿ ನೀರಾವರಿ ಮಾಡುತ್ತಿದ್ದಾರೆ. ಆದ್ದರಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರವನ್ನು ಬರಪಟ್ಟಿಗೆ ಸೇರ್ಪಡೆಗೊಳಿಸಬೇಕು. ಜನರ ದೈನಂದಿನ ಕೆಲಸಕ್ಕೂ ಅಡ್ಡಿಯಾಗಿರುವ ಅರಣ್ಯಇಲಾಖೆ ಕಾನೂನು ಸರಳೀಕರಣಗೊಳಿಸುವ ಮೂಲಕ ಮಲೆನಾಡ ಜನರು ಬದುಕುವ ಹಕ್ಕು ಕಲ್ಪಿಸಬೇಕು. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಆತಂಕ ಪಡುವ ಅಗತ್ಯವಿಲ್ಲ:

ರಾಜ್ಯಸಭಾ ಸದಸ್ಯ ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಕಸ್ತೂರಿರಂಗನ್ ವರದಿ ಚರ್ಚೆ ಕಾರ್ಯಕ್ರಮ ರಾಜಕೀಯೇತರ. ಇಲ್ಲಿ ಎಲ್ಲ ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ. ನೈಜವಾಗಿ ಸಮಸ್ಯೆ ಅರಿಯಲು ಸರ್ಕಾರವೆ ರೈತರ ಮನೆ ಬಾಗಿಲಿಗೆ ಆಗಮಿಸುವ ಮೂಲಕ ಹೊಸ ಪರಂಪರೆಗೆ ಕಾಂಗ್ರೆಸ್ ಸರ್ಕಾರ ಬುನಾದಿ ಹಾಕಿದೆ. ಇದಲ್ಲದೆ ವರದಿ ಚರ್ಚೆ ನಡೆಸಲು ಮೂರು ದಿನದ ವಿಶೇಷ ವಿಧಾನಸಭೆ ಅಧಿವೇಶನ ನಡೆಯಲಿದೆ. ವರದಿಗೆ ತಾರ್ಕಿಕ ಅಂತ್ಯ ಕಾಣುವವರೆಗೆ ಮುಖ್ಯಮಂತ್ರಿ ವಿಶ್ರಮಿಸುವುದಿಲ್ಲ. ಆದ್ದರಿಂದ ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಗೊಂಡಿರುವ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

ವೇದಿಕೆಯಲ್ಲಿ ಶೃಗೇರಿ ಶಾಸಕ ರಾಜೇಗೌಡ, ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರೀಸ್, ವಿರಾಜಪೇಟೆ ಶಾಸಕ ಪೊನ್ನಣ್ನ, ಜಿಲ್ಲಾಧಿಕಾರಿ ಲತಾಕುಮಾರಿ, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಶಿವರಾಂ, ಬಿ.ಆರ್. ಗುರುದೇವ್, ಎಚ್.ಎಂ. ವಿಶ್ವನಾಥ್, ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಮುರುಳಿಮೋಹನ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಲಿ’
10000 ಎಂಎಎಚ್‌ ಬ್ಯಾಟರಿಯ ರೆಡ್‌ಮಿ 17 ಬಿಡುಗಡೆ