ಯಲಬುರ್ಗಾ: ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜತೆಗೆ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ ಎಂದು ಕುದರಿಮೋತಿ-ಚಿಕ್ಕಮ್ಯಾಗೇರಿ ಮೈಸೂರು ಸಂಸ್ಥಾನ ಮಠದ ಶ್ರೀವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಹುಚ್ಚಿರೇಶ್ವರರ ನೂತನ ರಥೋತ್ಸವ ನಿರ್ಮಾಣ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಭಗವಂತನ ಕೃಪೆಗೆ ಪಾತ್ರರಾಗಲು ನಿರ್ಮಲವಾದ ಭಕ್ತಿ ಹೇಗೆ ಶ್ರೇಷ್ಠವೋ ಹಾಗೆಯೇ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು ಎಂದರು.
ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ, ಭೂ ಕೈಲಾಸ ಮೇಲುಗದ್ದುಗೆಮಠದ ಶ್ರೀಗುರುಶಾಂತವೀರ ಸ್ವಾಮೀಜಿ, ಮಕ್ಕಳ್ಳಿಯ ಶ್ರೀ ಶಿವಾನಂದ ಸ್ವಾಮೀಜಿ, ಈಶ್ವರಿ ವಿಶ್ವ ವಿದ್ಯಾಲಯದ ಯೋಗಿನಿ ಅಕ್ಕ, ಗೀತಾ ಅಕ್ಕ ಸಾನ್ನಿಧ್ಯ ವಹಿಸಿದ್ದರು.ಕುಕನೂರು ತಾಲೂಕಿನ ಬುದಗುಂಪಾದ ಶರಣ ಶ್ರೀಶಿವಬಸವೇಶ್ವರ ಸೇವಾ ಸಮಿತಿ ಹಾಗೂ ಸದ್ಭಕ್ತರು ನಂದಿ ಕೋಲು ಹಾಗೂ ಹಗ್ಗದ ಸೇವೆಗೈದರು. ಸಂಜೆ ವೇಳೆ ಅಪಾರ ಭಕ್ತರ ಸಮ್ಮುಖದಲ್ಲಿ ನೂತನ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಹುಡೇಜಾಲಿಯ ಪತ್ರಿ ಬಸವೇಶ್ವರ ಹಿರೇಮಠದ ಶ್ರೀ ವೀರಯ್ಯ ತಾತನವರು ಕಳೆದ ಐದು ದಿನಗಳಿಂದ ಹುಚ್ಚಿರೇಶ್ವರ ಜೀವನ ಚರಿತ್ರೆ ಕುರಿತು ಪುರಾಣ ಪ್ರವಚನ ಪಠಣಗೈದರು. ಗಾಯಕ ಮಂಗಳೇಶ ಶ್ಯಾಗೋಟಿ, ತಬಲಾ ವಾದಕ ನೀಲಕಂಠಪ್ಪ ರೊಡ್ಡರ ಸಂಗೀತ ಸೇವೆ ಸಲ್ಲಿಸಿದರು. ಈ ಸಂದರ್ಭ ಚಿಕ್ಕಮ್ಯಾಗೇರಿ ಹಾಗೂ ಸುತ್ತ ಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.