ನ್ಯಾಯಾಲಯಗಳು ನಗರದಿಂದ ಹೊರಗಿರುವುದು ಸೂಕ್ತವಲ್ಲ: ನ್ಯಾಯಮೂರ್ತಿ ನರೇಂದ್ರಪ್ರಸಾದ್‌

KannadaprabhaNewsNetwork |  
Published : Jun 23, 2025, 11:48 PM IST
23ಎಚ್ಎಸ್ಎನ್18 : ಬೇಲೂರು ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ನ್ಯಾಯಾಲಯ ಉದ್ಘಾಟನಾ ಸಮಾರಂಭ. | Kannada Prabha

ಸಾರಾಂಶ

ನಮ್ಮ ವಕೀಲರ ಸಂಘ ತುಂಬಾ ಚಿಕ್ಕ ಕೊಠಡಿಯಲ್ಲಿ ಇರುವುದರಿಂದ ವಕೀಲರಿಗೆ ತುಂಬಾ ತೊಂದರೆಯಾಗುತ್ತಿದೆ, ಅಲ್ಲದೆ ನ್ಯಾಯಾಲಯ ಪಕ್ಕದಲ್ಲಿ ಸುಮಾರು ಎರಡು ಎಕರೆ ಜಮೀನಿದ್ದು ನಮಗೆ ಒಂದು ಸುಸಜ್ಜಿತ ವಕೀಲರ ಸಂಘ ಹಾಗೂ ಲೈಬ್ರರಿಗೆ ನಿರ್ಮಾಣವಾದರೆ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರಿನ ಜೆಎಂಎಫ್‌ ನ್ಯಾಯಾಲಯ ಪಟ್ಟಣದ ಹೊರವಲಯದಲ್ಲಿರುವ ಕಾರಣದಿಂದ ಜನಸಾಮಾನ್ಯರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ, ತಾಲೂಕು ಕಚೇರಿಯ ಆಸುಪಾಸಿನಲ್ಲಿ ನ್ಯಾಯಾಲಯ ನಿರ್ಮಿಸುವುದು ಸೂಕ್ತವೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿನ ಜೆಎಂಎಫ್‌ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಹಾಸನ, ಲೋಕೋಪಯೋಗಿ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇದೇ ನ್ಯಾಯಾಲಯದಲ್ಲಿ ಆರು ಸಾವಿರಕ್ಕೂ ಅಧಿಕ ಪ್ರಕರಣಗಳಿವೆ ಎಂಬ ಹಿನ್ನೆಲೆ ಹೆಚ್ಚುವರಿ ನ್ಯಾಯಾಲಯ ನೀಡಲಾಗಿದೆ. ಇನ್ನು ಮುಂದೆ ವಕೀಲರ ಜವಾಬ್ದಾರಿ ಜಾಸ್ತಿಯಾಗಿದೆ. ಕಕ್ಷಿದಾರ ವಿನಾಃಕಾರಣ ಅಲೆಯುವ ಪರಿಸ್ಥಿತಿ ನಿರ್ಮಿಸಬೇಡಿ. ನ್ಯಾಯಾಲಯದಲ್ಲಿ ಕನಿಷ್ಠ ಒಂದು ಸುಸಜ್ಜಿತ ಸಭಾಂಗಣ ಇರಲಿ, ಇಂದು ಕಟ್ಟಡದ ಮೂಲೆಯಲ್ಲಿ ಸಮಾರಂಭ ಅಯೋಜಿಸಿದ್ದು ತೃಪ್ತಿ ತಂದಿಲ್ಲ. ಸ್ಥಳೀಯ ಶಾಸಕರ ಸಹಕಾರ ಪಡೆದು ಶೀಘ್ರವೇ ವಕೀಲರ ಭವನ, ಗ್ರಂಥಾಲಯ, ಸಭಾಂಗಣ, ವಸತಿಗೃಹಕ್ಕೆ ಪ್ರಸ್ತಾವನೆ ಕಳಿಸಿ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಇಲಾಖೆಗೆ ಹೆಣ್ಣು ಮಕ್ಕಳು ಬರುತ್ತಿರುವುದು ಸಂತಸದ ವಿಷಯ ಎಂದರು. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಗಾರವನ್ನು ಏರ್ಪಡಿಸುವುದರಿಂದ ಯುವ ವಕೀಲರಿಗೆ ಹೆಚ್ಚಿನ ಕಾನೂನಿನ ಅರಿವು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ವಕೀಲರ ಭವನವನ್ನು ನಿರ್ಮಾಣ ಮಾಡುವುದಾದರೆ ನಮ್ಮ ಸಹಕಾರ ಇರುವುದಾಗಿ ಭರವಸೆ ನೀಡಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮಾತನಾಡಿ, ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಮೊದಲು ಕಕ್ಷಿದಾರರನ್ನು ಅನ್ನದಾತರು ಎಂದು ಗೌರವಿಸಿದರೆ ಮಾತ್ರ ನ್ಯಾಯಾಂಗ ಇಲಾಖೆಯ ಘನತೆ ಉಳಿಯುತ್ತದೆ. ನಿಮ್ಮ ಬಳಿ ಬರುವಂಥ ನೊಂದವರಿಗೆ ಮತ್ತೆ ಮತ್ತೆ ಅಲೆಯುವ ಸ್ಥಿತಿಮಾಡಬೇಡಿ, ಆದಷ್ಟು ಕಡಿಮೆ ಶುಲ್ಕದಲ್ಲಿ ಅವರಿಗೆ ಎಲ್ಲಾ ರೀತಿಯ ಸಹಾಯ ನೀಡಿದಾಗ ಮಾತ್ರ ಅವರ ಬೆವರಿಗೆ ಬೆಲೆ ಬರುತ್ತದೆ. ಮಲೆನಾಡು ಭಾಗದ ವಕೀಲರು ಬೆಳಗ್ಗೆ ಲಾಯರ್ ಮಧ್ಯಾಹ್ನ ತೋಟ ಎನ್ನುವ ಬದಲು ಸಂಪೂರ್ಣ ನ್ಯಾಯಾಂಗದಲ್ಲಿ ತೊಡಗಿಸಿಕೊಂಡು ನ್ಯಾಯ ನೀಡಿ, ವಕೀಲರಿಗೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆ ಇದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಬೇಲೂರು ನ್ಯಾಯಾಲಯದಲ್ಲಿ ೬ ಸಾವಿರ ಪ್ರಕರಣಗಳಿವೆ, ತ್ವರಿತ ಇತ್ಯರ್ಥ್ಯಕ್ಕೆ ಹೆಚ್ಚುವರಿ ನ್ಯಾಯಾಲಯ ಅವಶ್ಯವಿರುವ ನಿಟ್ಟಿನಲ್ಲಿ ವಕೀಲರ ಕೋರಿಕೆಯಂತೆ ಹೆಚ್ಚುವರಿ ನ್ಯಾಯಾಲಯ ನಿರ್ಮಿಸಲಾಗಿದೆ. ಅಲ್ಲದೆ ವಕೀಲರ ಹಿತ ದೃಷ್ಟಿಯಿಂದ ನೀವು ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದರೆ ವಕೀಲರ ಭವನ ಹಾಗೂ ನ್ಯಾಯಾಧೀಶರಿಗೆ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ನಾನು ಕೂಡಲೇ ಸನ್ನದ್ಧರಾಗುತ್ತೇನೆ ಎಂದು ಭರವಸೆ ನೀಡಿದರು.

ನ್ಯಾಯಾಲಯ ಮುಂಭಾಗದ ವೈಡಿಡಿ ಕಾಲೇಜು ಆವರಣದಲ್ಲಿ ಸರ್ಕಾರದ ವತಿಯಿಂದ ೪ ಕೋಟಿ ರು. ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಶೀಘ್ರದಲ್ಲಿ ಭೂಮಿ ಪೂಜೆ ಮಾಡುವುದರ ಜೊತೆಗೆ ಅದು ಸಹ ವಕೀಲರಿಗೆ ಅನುಕೂಲವಾಗುತ್ತದೆ ಎಂದರು.

ನಮ್ಮ ವಕೀಲರ ಸಂಘ ತುಂಬಾ ಚಿಕ್ಕ ಕೊಠಡಿಯಲ್ಲಿ ಇರುವುದರಿಂದ ವಕೀಲರಿಗೆ ತುಂಬಾ ತೊಂದರೆಯಾಗುತ್ತಿದೆ, ಅಲ್ಲದೆ ನ್ಯಾಯಾಲಯ ಪಕ್ಕದಲ್ಲಿ ಸುಮಾರು ಎರಡು ಎಕರೆ ಜಮೀನಿದ್ದು ನಮಗೆ ಒಂದು ಸುಸಜ್ಜಿತ ವಕೀಲರ ಸಂಘ ಹಾಗೂ ಲೈಬ್ರರಿಗೆ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಶಾಸಕರು ಇದರ ಬಗ್ಗೆ ಗಮನ ಹರಿಸುವಂತೆ ವಕೀಲರ ಸಂಘದ ಅಧ್ಯಕ್ಷ ಸಿ. ಎಂ. ಪೃಥ್ವಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ, ಬೇಲೂರು ತಾಲೂಕು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಶಿಕಲಾ. ಕಿರಿಯ ಶ್ರೇಣಿ ನ್ಯಾಯಾಧೀಶರಾದ ನಾಗೇಂದ್ರ, ನೂತನ ನ್ಯಾಯಾಧೀಶರಾದ ಸಲ್ಮಾ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾದ ನಳಿನ, ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಪೃಥ್ವಿ, ಕಾರ್ಯದರ್ಶಿ ಪುಟ್ಟಸ್ವಾಮೀಗೌಡ, ದಿಲೀಪ್, ಹಿರಿಯ ವಕೀಲರಾದ ಲಿಂಗೇಶ್, ಚಂದ್ರೇಗೌಡ, ನಟರಾಜ್, ಸರ್ಕಾರಿ ಅಭಿಯೋಜಕರಾದ ಶಶಿಕಲಾ ಹಾಗೂ ಗೀತಾಮಣಿ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ