ಹಾವೇರಿ: ಸ್ಪಷ್ಟ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯುಪಿಎಸ್‌ಸಿ ಕಠಿಣವಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಯುಪಿಎಸ್‌ಸಿ ಯಶಸ್ವಿಯಾಗುವುದು ಬಹಳ ಕಷ್ಟವೇನಲ್ಲ. ಪ್ರಬಲವಾದ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯುಪಿಎಸ್‌ಸಿಯೂ ಸುಲಭವೇ ಆಗಿದೆ ಎಂದರು.
ಜಿಪಂ ಸಿಇಒ ರುಚಿ ಬಿಂದಲ್ ಮಾತನಾಡಿ, ನಾನೂ ಐದನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾಗಿದ್ದೇನೆ. ಇದರಲ್ಲಿ ಇರುವ ಆತ್ಮತೃಪ್ತಿ ಎಲ್ಲಿಯೂ ಇಲ್ಲ. ಯುಪಿಎಸ್‌ಸಿಯಲ್ಲಿ 21 ಸರ್ವಿಸ್ ಲಭ್ಯವಿದ್ದು, ಇಂತಹ ಸಾಧನೆಗೆ ಶಿಕ್ಷಕರು, ಪಾಲಕರ ಸಹಕಾರ ಅತಿ ಅಗತ್ಯವಾಗಿದೆ ಎಂದರು.ಪ್ರಸಕ್ತ ಸಾಲಿನ ಯುಪಿಎಸ್‌ಸಿ 41ನೇ ರ‍್ಯಾಂಕ್ ಪಡೆದ ಡಾ. ಸಚಿನ ಬಿ. ಗುತ್ತೂರ ಮಾತನಾಡಿ, ಸ್ಪಷ್ಟ ಗುರಿ ಇಟ್ಟುಕೊಂಡು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿದರೆ ಯಾರು ಬೇಕಾದರೂ ಯಶಸ್ಸು ಗಳಿಸಬಹುದು ಎಂಬುದಕ್ಕೆ ಸಾಮಾನ್ಯ ಕುಟುಂಬದಿಂದ ಬಂದ ನಾವೇ ಉದಾಹರಣೆ. ಕೃಷಿಕರು, ಕೂಲಿಕಾರರು, ಕಾರ್ಮಿಕರ ಮಕ್ಕಳು ಮನಸ್ಸು ಮಾಡಿದರೆ ಯುಪಿಎಸ್‌ಸಿ ಪಾಸು ಮಾಡಬಹುದು ಎಂದರು.
ಯುಪಿಎಸ್‌ಸಿ 588ನೇ ರ‍್ಯಾಂಕ್ ಪಡೆದ ಜಿಲ್ಲೆಯ ಅಬುಸಾಲಿಯಾ ಖಾನ್ ಕುಲಕರ್ಣಿ ಮಾತನಾಡಿ, ಕನ್ನಡ ಶಾಲೆಯ ಶಿಕ್ಷಕರ ಸ್ಫೂರ್ತಿಯಿಂದ ನಾನು ಮೊರಾರ್ಜಿ ದೇಸಾಯಿ ಶಾಲೆಗೆ ಸೇರಿ, ಯುಪಿಎಸ್‌ಸಿ ಕನಸು ಕಂಡೆ. ಸರ್ಕಾರದಿಂದ ನನಗೆ ಶುಲ್ಕಕ್ಕಿಂತ ಹೆಚ್ಚು ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ಓದಲು ಸಹಕಾರಿಯಾಯಿತು ಎಂದರು.ಜಿಲ್ಲೆಯ ಯುಪಿಎಸ್‌ಸಿ ಸಾಧಕರಾದ ಸಚಿನ್ ಗುತ್ತೂರ ಹಾಗೂ ಅಬುಸಾಲಿಯಾ ಖಾನ್ ಕುಲಕರ್ಣಿ ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು. ಎಎಸ್‌ಪಿ ಲಕ್ಷ್ಮಣ ಶಿರಕೋಳ, ಎಡಿಸಿ ಡಾ. ನಾಗರಾಜ ಎಲ್., ಸವಣೂರು ಎಸಿ ಶುಭಂ ಶುಕ್ಲಾ, ಎಂಆರ್‌ಎಂ ಟ್ರಸ್ಟ್ ಚೇರ್ಮನ್ ಡಾ. ರಾಮಮೋಹನ ರಾವ್, ಜಿಎಚ್ ಕಾಲೇಜ್ ಪ್ರಾಚಾರ್ಯ ಪ್ರೊ.ಎಂ.ಎಂ. ಹೊಳ್ಳಿಯವರ, ವಾಸವಿ ಅಕಾಡೆಮಿಯ ಇಳ್ಳೂರ ಮೋಹನರಾಜ, ಇತರರು ಇದ್ದರು.