ರೈತರಿಗೆ ಕಣ್ಣೀರು ಹಾಕಿಸಿದ ಸರ್ಕಾರಕ್ಕೆ ಒಳ್ಳೆಯದಾಗಲ್ಲ: ವಿಜಯೇಂದ್ರ

KannadaprabhaNewsNetwork |  
Published : Jul 30, 2025, 12:45 AM IST
ವಿಜಯೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ಗೊಬ್ಬರದ ಬೇಡಿಕೆ ಹೆಚ್ಚಾಗುತ್ತದೆ ಎಂದು ಪೂರಕ ಪೂರ್ವ ಸಿದ್ಧತೆ ಮಾಡಿಕೊಂಡು ಗೊಬ್ಬರ ದಾಸ್ತಾನು ಮಾಡದೆ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿ ಅವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಗೆ ತಂದಿದೆ.

ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡದೆ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಗೊಬ್ಬರಕ್ಕಾಗಿ ದಿನಬೆಳಗ್ಗೆ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಬೀದಿಪಾಲು ಮಾಡಿದೆ. ರೈತರ ಕಣ್ಣಲ್ಲಿ ನೀರು ತರಿಸುವ ಯಾವುದೇ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬಿಜೆಪಿ ರೈತ ಮೋರ್ಚಾ ನೇತೃತ್ವದ ಪ್ರತಿಭಟನೆ ಅಂಗವಾಗಿ ಮಂಗಳವಾರ ನಗರದ ಬಿಜಿಎಸ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ವಿಜಯೇಂದ್ರ, ಈ ಬಾರಿ ಮುಂಗಾರು ಉತ್ತಮವಾಗಿದೆ ಎಂದು ಹವಾಮಾನ ಇಲಾಖೆ ಮೂರು ತಿಂಗಳ ಮೊದಲೇ ಮುನ್ಸೂಚನೆ ನೀಡಿದೆ. ರೈತರಿಗೆ ಗೊಬ್ಬರದ ಬೇಡಿಕೆ ಹೆಚ್ಚಾಗುತ್ತದೆ ಎಂದು ಪೂರಕ ಪೂರ್ವ ಸಿದ್ಧತೆ ಮಾಡಿಕೊಂಡು ಗೊಬ್ಬರ ದಾಸ್ತಾನು ಮಾಡದೆ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿ ಅವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಗೆ ತಂದಿದೆ ಎಂದರು.ರಾಜ್ಯಕ್ಕೆ ಯೂರಿಯಾ ಗೊಬ್ಬರವು 6.30 ಲಕ್ಷ ಟನ್‌ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಕರ್ನಾಟಕಕ್ಕೆ ನೀಡಿದೆ. ಈ ಗೊಬ್ಬರವನ್ನುರೈತರಿಗೆ ನೀಡದೆ ದಲ್ಲಾಳಿಗಳಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ಕಡೆ ದಲ್ಲಾಳಿಗಳು, ಕಾಳಸಂತೆಕೋರರು ತುಂಬಿರುತ್ತಾರೆ. ಆದರೆ ರೈತರು ದುಪ್ಪಟ್ಟು ಹಣಕೊಟ್ಟು ಗೊಬ್ಬರ ಕೊಳ್ಳುವಂತಾಗಿದೆ ಎಂದು ಹೇಳಿದರು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತಮ್ಮಕುರ್ಚಿ ಉಳಿಸಿಕೊಳ್ಳಲು ತಿಂಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಮನೆಯ ಗೇಟ್‌ ಕಾಯುತ್ತಾರೆ. ಆದರೆ ದೆಹಲಿಯಲ್ಲಿ ಪ್ರಧಾನ ಮಂತ್ರಿ, ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾಲ್ಕು ಬಾರಿ ಇವರು ದೆಹಲಿಗೆ ಹೋಗುತ್ತಾರೆ, ಮೂರು ಬಾರು ಸುರ್ಜೆವಾಲ ಬೆಂಗಳೂರಿಗೆ ಬಂದು,ಇವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆ, ಬೇರೆಯವರನ್ನು ಮಾಡಬೇಕೆ ಎಂದು ಸಭೆ ಮಾಡುತ್ತಾರೆ ಎಂದರು.ಹೀಗಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಇದೊಂದು ಲಜ್ಜೆಗೆಟ್ಟ ಸರ್ಕಾರ. ತಮ್ಮ ಲೋಪ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ. ರಾಜ್ಯದ ಕೃಷಿ ಮಂತ್ರಿಯ ಅವಿವೇಕತನದಿಂದ ಇಂದು ಗೊಬ್ಬರ ಸಮಸ್ಯೆ ಉಂಟಾಗಿದೆ. ಮಂಡ್ಯ, ಬೆಂಗಳೂರು ಬಿಟ್ಟು ಕೃಷಿ ಮಂತ್ರಿ ಜಿಲ್ಲೆಗಳ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿಲ್ಲ. ಮುಖ್ಯಮಂತ್ರಿ ಕೂಡಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ರೈತರ ಸ್ಥಿತಿಗತಿ ಪರಿಶೀಲಿಸಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿಯವರು ಕೊಡುತ್ತಿದ್ದ ಕಿಸಾನ್ ಸಮ್ಮಾನ್‌ ಯೋಜನೆಯ 6 ಸಾವಿರ ರು. ಜೊತೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಸರ್ಕಾರದಿಂದ 4 ಸಾವಿರ ರು ನೀಡುತ್ತಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಈ ಎರಡೂ ಯೋಜನೆಗಳನ್ನು ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ. ರೈತ ವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುತ್ತದೆ ಎಂದು ಹೇಳಿದರು.ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಕೇಂದ್ರ ಸರ್ಕಾರ ಕೊಟ್ಟ ಗೊಬ್ಬರವನ್ನು ಅನ್ನದಾತರಿಗೆ ನೀಡದ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ ಎಂದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಮಾಜಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡರಾದ ಎಸ್.ಪಿ.ಚಿದಾನಂದ್, ಡಿ.ಕೃಷ್ಣಕುಮಾರ್, ಎಸ್.ಡಿ.ದಿಲೀಪ್‌ಕುಮಾರ್, ಬಿ.ಎಚ್. ಅನಿಲ್‌ಕುಮಾರ್, ಎಲ್.ಸಿ.ನಾಗರಾಜು, ಬಿ.ಕೆ. ಮಂಜುನಾಥ್, ಸಿ.ಭಾರತಿ, ಚಂದ್ರಶೇಖರ ಬಾಬು, ಎಚ್.ಟಿ.ಭೈರಪ್ಪ, ಭೈರಣ್ಣ, ನಂದೀಶ್, ವಿವಿಧ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''