ಕೇಂದ್ರ ಸರ್ಕಾರದ ತಪ್ಪುಗಳನ್ನು ಚರ್ಚೆ ಮಾಡಲು ರಾಜ್ಯದ ಸಂಸದರು ತಯಾರಿಲ್ಲ. ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಮೌನ ಸಿಂಗ್ ಎಂದು ಟೀಕಿಸುತ್ತಿದ್ದ ಬಿಜೆಪಿ ಇಂದು ಹಗರಣಗಳು ನಡೆಯುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಟೀಕಿಸಿದರು.
ಕುಂದಾಪುರ: ಕೇಂದ್ರ ಸರ್ಕಾರದ ತಪ್ಪುಗಳನ್ನು ಚರ್ಚೆ ಮಾಡಲು ರಾಜ್ಯದ ಸಂಸದರು ತಯಾರಿಲ್ಲ. ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಮೌನ ಸಿಂಗ್ ಎಂದು ಟೀಕಿಸುತ್ತಿದ್ದ ಬಿಜೆಪಿ ಇಂದು ಹಗರಣಗಳು ನಡೆಯುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಅಂದು ಮನಮೋಹನ್‌ಸಿಂಗ್ ಮೌನ ಸಿಂಗ್ ಆಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಟೀಕಿಸಿದರು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಬುಧವಾರ ನಗರದ ಶಾಸ್ತ್ರೀವೃತ್ತದ ಫ್ಲೈಓವರ್ ಕೆಳಭಾಗದಲ್ಲಿ ಕುಂದಾಪುರದ ಎನ್ಎಸ್‌ಯುಐ ಆಯೋಜಿಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೀಟ್ ಪ್ರಶ್ನೆಪತ್ರಿಕೆ ಹಗರಣದಿಂದಾಗಿ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಬೀದಿಗೆ ಬಂದಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಯಾಗಿಲ್ಲ, ಮಾರಾಟವಾಗಿದೆ. ಸಮಾಜದಲ್ಲಿ ಅತ್ಯಂತ ಗೌರವ ಕೊಡುವ ವೃತ್ತಿ ಇದ್ದರೆ ಅದು ಶಿಕ್ಷಕ ವೃತ್ತಿ. ಆದರೆ ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ ಶಿಕ್ಷಕರೇ ಬಂಧನಕ್ಕೊಳಗಾಗಿರುವುದು ದುರಂತ ಎಂದರು.ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಬಿಡಬೇಕು. ಸಿಇಟಿ ಮೂಲಕ ಪರೀಕ್ಷೆ ನಡೆಯಲಿ. ಈ ಹಿಂದೆ ಸಿಇಟಿ ಪರೀಕ್ಷೆ ಇದ್ದಾಗ ಎಂದಿಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿಲ್ಲ. ಮಾರಾಟವೂ ಆಗಿರಲಿಲ್ಲ. ಪ್ರಶ್ನೆ ಪತ್ರಿಕೆ ಮಾರಾಟದಲ್ಲಿ ಯಾರ್ಯಾರು ತೊಡಗಿಕೊಂಡಿದ್ದಾರೋ ಅವರೆಲ್ಲರ ವಿರುದ್ದ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಚರ್ಚೆ ಮಾಡುವ ಪ್ರತಿನಿಧಿಗಳನ್ನು ಆರಿಸಿ: ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದ ಪ್ರತಿಯೊಂದು ಸಾಮಾನ್ಯ ವಸ್ತುವಿನ ದರ ಜಾಸ್ತಿಯಾಗುತ್ತದೆ. ಮುಂದಿನ ದಿನದಲ್ಲಿ ಸಮಸ್ಯೆ ಪರಿಹಾರ ಮಾಡಬೇಕಾದರೆ ಜವಾಬ್ದಾರಿಯುತ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದರು.ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರದ ದಲ್ಲಾಳಿಗಳೇ ಸೋರಿಕೆ ಮಾಡಿ ಶ್ರೀಮಂತರ ಮಕ್ಕಳಿಗೆ ಮಾರಾಟ ಮಾಡುವ ಮೂಲಕ ಶ್ರೀಮಂತರ ಮಕ್ಕಳನ್ನು ವೈದ್ಯರಾಗಿ ಮಾಡಲು ಹೊರಟಿರುವುದು ದುರಂ ಎಂದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಜಿಲ್ಲಾ ಕಾರ್ಯದರ್ಶಿ ಸುಮಂತ್ ಶೆಟ್ಟಿ ಮಾತನಾಡಿದರು.ಸಂಘಟನೆ ರಾಜ್ಯ ಕಾರ್ಯದರ್ಶಿ ಸಯ್ಯದ್ ಪುರ್ಖಾನ್ ಯಾಸಿನ್, ತಾಲೂಕು ಅಧ್ಯಕ್ಷ ಸುಜನ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸುದೀಶ್ ಶೆಟ್ಟಿ ಕರ್ಕಿ, ಶಮಂತ್ ಕುಂದಾಪುರ, ಅರ್ಜುನ್ ನಾಯರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಅಧ್ಯಕ್ಷ ಸುದೇಶ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಪೂಜಾರಿ, ಅಭಿಜಿತ್ ಪೂಜಾರಿ, ಎನ್ಎಸ್ಯುಐ ಪದಾಧಿಕಾರಿಗಳಾದ ದರ್ಶನ ಶೆಟ್ಟಿ, ಧನುಷ್ ಕಾಳಾವರ, ಸುಮುಖ್, ರಂಜಿತ್ ಬ್ರಹ್ಮಾವರ ಮತ್ತಿತರರು ಇದ್ದರು.ಮುಖಂಡರ ಬಂಧನ: ಪ್ರತಿಭಟನಾ ಸಭೆಯ ಬಳಿಕ ಎನ್ಎಸ್‌ಯುಐ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನೋಟುಗಳ ಜೆರಾಕ್ಸ್ ಪ್ರತಿಯನ್ನು ಎಸೆದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶಭರಿತ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲೇ ಕೂತು ಪ್ರತಿಭಟಿಸಿದರು. ಪೊಲೀಸರು ಪ್ರತಿಭಟನಾನಿರತ ಎನ್ಎಸ್ಯುಐ ಮುಖಂಡರನ್ನು ಬಂಧಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.