ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಕನ್ನಡ-ಕರ್ನಾಟಕ- ವೈಭವ ಶೀರ್ಷಿಕೆಯಡಿ ಜರುಗಿದ ಗೋಷ್ಠಿ ಒಂದರಲ್ಲಿ ಕರ್ನಾಟಕ 50 ಸಂಭ್ರಮ-ಸಂದಿಗ್ಧತೆಗಳು ಕುರಿತು ಮಾತನಾಡಿದ ಬೆಂಗಳೂರಿನ ಡಾ. ಬಿ.ಎ. ಅನ್ನದಾನೇಶ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಬಳಿಕ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕನ್ನಡವನ್ನು ತಂತ್ರಜ್ಞಾನಕ್ಕೆ ಅಳವಡಿಸಿಕೊಳ್ಳಬೇಕಿದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶ ಕಲ್ಪಿಸುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.
ಕರ್ನಾಟಕ ಐತಿಹಾಸಿಕ ಪರಂಪರೆ ಕುರಿತು ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು.ಕನ್ನಡ ನುಡಿ ಪರಂಪರೆ ಕುರಿತು ಡಾ.ಕಾಂತೇಶ ಅಂಬಿಗೇರ ಮತ್ತು ಡಾ. ಸುಭಾಷ್ ಚನ್ನಗೌಡ್ರ ಮಾತನಾಡಿದರು. ಡಾ.ಎಸ್.ಜಿ. ವೈದ್ಯ ಅಧ್ಯಕ್ಷತೆ ವಹಿಸಿದ್ದರು.
ವಿಶ್ರಾಂತ ಪ್ರಾಧ್ಯಾಪಕ ಮಾರುತಿ ಶಿಡ್ಲಾಪುರ ಆಶಯ ನುಡಿಗಳನ್ನಾಡಿದರು. ವಿಶ್ರಾಂತ ಪ್ರಾಚಾರ್ಯ ಎನ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿ ಮೂರರಲ್ಲಿ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಜೆ.ಎಂ. ಮಠದ, ಎಸ್.ಎನ್. ದೊಡ್ಡಗೌಡ್ರ, ಸಿ.ಎಸ್. ಮರಳಿಹಳ್ಳಿ, ಎಸ್.ಎಂ. ಬಡಿಗೇರ, ಚಂದ್ರಶೇಖರ ಜಾಡರ, ಕೃಷ್ಣರಾಜ ವರ್ಣೇಕರ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ಎಪಿಎಂಸಿ ಸಮುದಾಯ ಭವನದ ಆವರಣದಲ್ಲಿ ಹಾಕಿರುವ ವಿವಿಧ ಮಳಿಗೆಗಳು ಆಕರ್ಷಣೆಯಾಗಿದ್ದವು.
ಸಹಜ ಯೋಗ ಆಧ್ಯಾತ್ಮಿಕ ಧ್ಯಾನದಲ್ಲಿ ಜನರಿಗೆ ಯೋಗ ಹಾಗೂ ಧ್ಯಾನ ಬಗ್ಗೆ ಅರಿವು ಮೂಡಿಸಲಾಯಿತು. ಕೈಮಗ್ಗ ನೇಕಾರರ ಉತ್ಪಾದಕರ ಮಾರಾಟ ಮಳಿಗೆಯಲ್ಲಿ ಕಾಟನ್ ಹಾಗೂ ಇಲಕಲ್ಲ ಸೀರೆಗಳನ್ನು ಮಹಿಳೆಯರು ಖರೀದಿ ಮಾಡುತ್ತಿರುವುದು ಕಂಡುಬಂತು. ಬ್ಯಾಗಲ್ಸ್ ಮಳಿಗೆಯಲ್ಲಿ ಯುವತಿಯರು ದಂಡು ಹೆಚ್ಚಾಗಿತ್ತು. ರಂಗ ಕುಸುಮ ಹಾಗೂ ಸನಾತನ ಸಂಸ್ಥೆಯ ಪುಸ್ತಕ ಮಳಿಗೆಗಳನ್ನು ಜನರು ವೀಕ್ಷಿಸಿದರು.