ಹಳಿಯಾಳದಲ್ಲಿ ಇ-ಪೌವತಿ- ಪಿಂಚಣಿ ಆದಾಲತ್‌ನಲ್ಲಿ ಶಾಸಕ
ಬಡವರು, ಶೋಷಿತರು, ನಿರ್ಗತಿಕರು, ಅಂಗವಿಕಲರ ಹಿತರಕ್ಷಣೆಯ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಕಲ್ಯಾಣಕಾರಿ ಯೋಜನೆಗಳ ಲಾಭ ಪಡೆಯಲು ಯಾವತ್ತೂ ಆರ್ಥಿಕವಾಗಿ ಸಂಪನ್ನರಾದವರೂ ಮುಂದಾಗಬಾರದು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.
ಸೋಮವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ ಇ-ಪೌವತಿ ಆಂದೋಲನ ಮತ್ತು ಪಿಂಚಣಿ ಆದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಥಿತಿವಂತರು ಕೈಯೊಡ್ಡಬಾರದು:ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮೊದಲಾದ ಯೋಜನಗಳನ್ನು ದುರ್ಬಲರಿಗೆ ಆಸರೆಯಾಗುವ ದಿಸೆಯಲ್ಲಿ ಸರ್ಕಾರ ಜಾರಿಗೊಳಿಸಿದೆ. ಹೀಗಿರುವಾಗ ಇಂತಹ ಯೋಜನೆಗಳಿಗೆ ಸ್ಥಿತಿವಂತರು ಕೈಯೊಡ್ಡುವುದು ಸರಿಯಲ್ಲ, ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ ಎಂದರು.ಜನಪ್ರತಿನಿಧಿಗಳ ಜವಾಬ್ದಾರಿಯಿದು:
ಜನಪ್ರತಿನಿಧಿಗಳು ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಮತಯಾಚನೆ ಮಾಡುವಾಗ ತೋರುವಂತಹ ಕಾಳಜಿ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೂ ತಲುಪಿಸಲು ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಅರ್ಹ ಪಿಂಚಣಿ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಶಾಸಕರು ವಿತರಿಸಿ, ಇ-ಕೈವೆಸಿ ಮತ್ತು ವಿವಿಧ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಪಿಂಚಣಿದಾರರಿಂದ ಅರ್ಜಿ ಸ್ವೀಕರಿಸಿದರು.