ತೆಲಂಗಾಣದಲ್ಲಿ ಬೇನಾಮಿ ಖಾತೆದಾರರ ಹೆಸರುಗಳಲ್ಲಿ ಬ್ಯಾಂಕ್ ಅಕೌಂಟ್‌ಗಳ ತೆರೆದು ನಿಗಮದ ಫಲಾನುಭವಿಗಳ ಹಣ ಡ್ರಾ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರ
ಸಚಿವ ನಾಗೇಂದ್ರ ಪರಿಶಿಷ್ಟ ಪಂಗಡದ ಹಣ ಕೊಳ್ಳೆ ಹೊಡೆದಿದ್ದಾರೆ. ಅವರ ವಿರುದ್ಧ ಗಂಭೀರವಾದ ಆರೋಪವಿದೆ. ಇಡಿ ಚಾರ್ಜ್ ಶೀಟ್ ಫೈಲ್ ಮಾಡಿದ್ದು, ಮತ್ತೆ ಸಚಿವರನ್ನಾಗಿ ಮಾಡಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ, ಸದನದಲ್ಲೂ ಈ ಕುರಿತು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ-ಜೆಡಿಎಸ್ (ಎನ್‌ಡಿಎ) ಮೈತ್ರಿಕೂಟದ ಪ್ರಚಾರದ ಪೂರ್ವಭಾವಿ ಹಾಗೂ ಕಾರ್ಯಕರ್ತರ ಬೃಹತ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಗೇಂದ್ರ ಸಚಿವರಿದ್ದಾಗ ವಾಲ್ಮೀಕಿ ನಿಗಮದಿಂದ ನೂರಾರು ಕೋಟಿ ಲಪಾಟಾಯಿಸಿದ್ದಾರೆ. ತೆಲಂಗಾಣದಲ್ಲಿ ಬೇನಾಮಿ ಖಾತೆದಾರರ ಹೆಸರುಗಳಲ್ಲಿ ಬ್ಯಾಂಕ್ ಅಕೌಂಟ್‌ಗಳ ತೆರೆದು ನಿಗಮದ ಫಲಾನುಭವಿಗಳ ಹಣ ಡ್ರಾ ಮಾಡಿದ್ದಾರೆ. ಇಂತಹ ಗಂಭೀರ ಆರೋಪಗಳಿಗೆ ಕಾರಣವಾದ ವ್ಯಕ್ತಿಗೆ ಮತ್ತೆ ಸಚಿವರನ್ನಾಗಿ ಮಾಡಿರುವುದು ಯಾಕೆ? ಇದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದರು.
ಬಡ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೇರಬೇಕಾದ ಹಣಲಪಟಾಯಿಸಿದ ಕಳಂಕ ಹೊತ್ತ ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಿಂದ ಕೂಡಲೇ ಕೈ ಬಿಡಬೇಕು. ನಾಗೇಂದ್ರ ಜಾಮೀನು ಉಲ್ಲಂಘನೆ ಮಾಡಿರುವ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಇನ್ನು ಬಿಡದಿ ಟೌನ್ ಶಿಪ್ ವಿರೋಧಿಸಿ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಪಾಲ್ಗೊಳ್ಳುವುದರೊಂದಿಗೆ ಪಾದಯಾತ್ರೆಗೆ ಬೆಂಬಲ ನೀಡಿದ್ದೇವೆ. ರೈತರೇ ಈ ಹೋರಾಟವನ್ನು ಪ್ರಾರಂಭ ಮಾಡಿದ್ದು, ಅವರನ್ನು ಹೆದರಿಸಿ ಬಲವಂತವಾಗಿ ಜಮೀನು ಬಿಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಈ ಕುರಿತು ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಆರ್‌ಎಸ್‌ಎಸ್ ನಿಷೇಧ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಸಿದ ವಿಜಯೇಂದ್ರ, ಅವರ ತಾತ ನೆಹರು, ಅಪ್ಪ ರಾಜೀವ್ ಗಾಂಧಿವರೆಗೆ ಏನೂ ಮಾಡಲು ಆಗಲಿಲ್ಲ. ಅವರು ಮೊದಲು ಭ್ರಮೆಯಿಂದ ಹೊರಬಂದು ಗೃಹ ಖಾತೆ ಸಮರ್ಪಕವಾಗಿ ನಿರ್ವಹಿಸಲಿ ಎಂದರು.
ಅಕ್ರಮ ವಲಸಿಗರನ್ನು ಹೊರ ಹಾಕುವಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಿದೆ. ಅಕ್ರಮ ವಲಸಿಗರ ವಿರುದ್ಧ ದೂರು ನೀಡಿದವರ ಮೇಲೆಯೇ ಪ್ರಕರಣ ದಾಖಲಾಗುತ್ತಿದ್ದು, ಈ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.