ಹಿರಿಯರ ಬಗ್ಗೆ ಅಸಡ್ಡೆ ಸರಿಯಲ್ಲ: ನ್ಯಾ. ರಾಜೇಶ್

KannadaprabhaNewsNetwork |  
Published : Sep 17, 2025, 01:06 AM IST
ಬಳ್ಳಾರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಕ್ರೀಡಾಂಗಣ ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2025 ರ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಹಿರಿಯ ನಾಗರಿಕರ  ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿದರು.  | Kannada Prabha

ಸಾರಾಂಶ

ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಿರುವುದು ಕಂಡು ಬರುತ್ತಿದ್ದು, ಹಿರಿಯರ ಬಗ್ಗೆ ಅಸಡ್ಡೆ ಸರಿಯಲ್ಲ.

ಹಿರಿಯ ನಾಗರಿಕರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಚಾಲನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಿರುವುದು ಕಂಡು ಬರುತ್ತಿದ್ದು, ಹಿರಿಯರ ಬಗ್ಗೆ ಅಸಡ್ಡೆ ಸರಿಯಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂಟೋನ್ ಮೆಂಟ್ ನ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕ್ರೀಡಾಂಗಣ(ಬಿಎಂಸಿಆರ್‌ಸಿ) ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2025ರ ಅಂಗವಾಗಿ ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಜೀವನದ ಮೂರು ಹಂತಗಳಾದ ಬಾಲ್ಯ, ಯೌವ್ವನ, ಮುಪ್ಪು ದಾಟಬೇಕು. ಮಕ್ಕಳಿಗೆ ತಪ್ಪು ಸರಿ ಕುರಿತು ಅರಿವಿರುವುದಿಲ್ಲ. ಇದೇ ರೀತಿ ಹಿರಿಯ ನಾಗರಿಕರು ವಯಸ್ಸಾದಂತೆ ಮಕ್ಕಳಂತಾಗುತ್ತಾರೆ. ಹೀಗಾಗಿ ವಯಸ್ಸಾದಂತೆ ತಮಗರಿಯದೆ ತಪ್ಪುಗಳನ್ನು ಮಾಡುತ್ತಾರೆ. ಆಗ ಅತ್ಯಂತ ಸಮಾಧಾನ ಚಿತ್ತದಿಂದ ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದರಲ್ಲದೆ, ಹಿರಿಯರ ಮಾರ್ಗದರ್ಶನವಿದ್ದರೆ ಮಾತ್ರ ಕುಟುಂಬ ಚೆನ್ನಾಗಿರಲು ಸಾಧ್ಯ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ್ ಮಾತನಾಡಿ, ಹಿರಿಯ ನಾಗರಿಕರ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಜಿಲ್ಲಾಡಳಿತ ನಮ್ಮನ್ನೆಲ್ಲಾ ವರ್ಷಕ್ಕೊಮ್ಮೆ ಬೆಸೆಯುತ್ತದೆ. ವರ್ಷಪೂರ್ತಿ ನಡೆದ ದುಃಖ ದುಮ್ಮಾನಗಳನ್ನು ನಾವು ಹಂಚಿಕೊಳ್ಳುತ್ತೇವೆ. ಕ್ರೀಡೆಗಳಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಆರೋಗ್ಯವಾಗಿರಬೇಕು ಎಂದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಉತ್ಸಾಹದಿಂದ ಇರಬೇಕು ಎಂದರು.

ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಉತ್ಸಾಹ ತೋರಿದರು.

ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ ಹಾಗೂ ಬಕೆಟ್‌ನಲ್ಲಿ ಬಾಲ್ ಎಸೆಯುವ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಸ್ಪರ್ಧೆ ಹಾಗೂ ಏಕ ಪಾತ್ರ ಅಭಿನಯ ಏರ್ಪಡಿಸಲಾಗಿತ್ತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ, ಸಂಡೂರು ಶಿಶು ಅಭಿವೃದ್ಧಿ ಅಧಿಕಾರಿ ನಾಗರಾಜ, ಅಂತಾರಾಷ್ಟ್ರೀಯ ಕ್ರೀಡಾಪಟು ಸತ್ಯನಾರಾಯಣ, ಚೆಂಗಾರೆಡ್ಡಿ ವೃದ್ಧಾಶ್ರಮದ ಆಡಳಿತಾಧಿಕಾರಿ ಗುರುಮೂರ್ತಿ, ಸಂಗನಕಲ್ಲು ಆದರ್ಶ ವೃದ್ಧಾಶ್ರಮದ ಅಧ್ಯಕ್ಷ ವೆಂಕೋಬಪ್ಪ, ಸಿರುಗುಪ್ಪ ಭೀಮಾ ವಿದ್ಯಾ ಸಂಸ್ಥೆಯ ಮಹೇಶ್ ಕುಮಾರ್, ಬಳ್ಳಾರಿ ಅನುಗ್ರಹ ವಿದ್ಯಾಸಂಸ್ಥೆಯ ಸಿಸ್ಟರ್ ಪ್ರಜ್ಞ ಸೇರಿದಂತೆ ದೈಹಿಕ ಶಿಕ್ಷಕರು, ಹಿರಿಯ ನಾಗರಿಕರು ಹಾಗೂ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಇತರರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ