ಗಂಗಾವತಿ: ಯಾವುದೇ ಸರಕಾರಿ ಯೋಜನೆಗಳಿಗೆ ನ್ಯಾಯಾಲಯದದಿಂದ ತಡೆಯಾತ್ರೆ ತಂದು ಕಾಮಗಾರಿ ನಿಲ್ಲಿಸುವುದು ಸರಿಯಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದ ಮಹಾವೀರ ವೃತ್ತದಲ್ಲಿ ನಗರೋತ್ಥಾನ ಯೋಜನೆಯ 21.33 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಆನೆಗೊಂದಿ ಉತ್ಸವ ಆಚರಿಸಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ದಿನಾಂಕ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ 15 ವಾರ್ಡ್‌ಗಳಿಗೆ 4ನೇ ಹಂತದಲ್ಲಿ ₹25 ಕೋಟಿ ಅನುದಾನ ಬಂದಿದ್ದು, 15 ವಾರ್ಡ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇನ್ನು ಎರಡು ವರ್ಷಗಳಲ್ಲಿ ಗಂಗಾವತಿ ನಗರವನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಲಾಗುತ್ತದೆ. ಈಗಾಗಲೇ ₹500 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದರು.ಪ್ರಾಸ್ತಾವಿಕವಾಗಿ ನಗರಸಭೆಯ ಪೌರಾಯುಕ್ತ ವಿರೂಪಾಕ್ಷಮೂರ್ತಿ ಮಾತನಾಡಿದರು. ಈ ವೇಳೆ ಸಂಸದ ರಾಜಶೇಖರ್ ಹಿಟ್ನಾಳ್, ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ, ನಗರಸಭೆ ಅಧ್ಯಕ್ಷೆ ಹೀರಾಬಾಯಿ, ನಗರಸಭಾ ಸದಸ್ಯರಾದ ಶ್ಯಾಮೀದ್ ಮನಿಯಾರ್, ರಮೇಶ ಚೌಡ್ಕಿ, ವಾಸುದೇವ ನವಲಿ, ದೊಡ್ಡಪ್ಪ ದೇಸಾಯಿ, ಜೋಗದ ನಾರಾಯಣಪ್ಪ ನಾಯಕ ಸೇರಿದಂತೆ ಪ್ರಮುಖರು ಇದ್ದರು.