ಕನ್ನಡಪ್ರಭ ವಾರ್ತೆ ಮಧುಗಿರಿ
ರಾಜ್ಯದ ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ತೈಲ ಬೆಲೆ ಏರಿಸಿರುವ ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ತಾಕತ್ತಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಲಕ್ಮೀಪತಿ ಹೇಳಿದರು.ಪಟ್ಟಣದ ತುಮಕೂರು ಗೇಟ್‌ನಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿದಾಗ ಮಾತ್ರ ಕೇಂದ್ರ ಸರ್ಕಾರ ದರ ಹೆಚ್ಚಿಸುತ್ತದೆ. ಆದರೆ ಪ್ರಸ್ತುತ ರಾಜ್ಯ ಸರ್ಕಾರ ದರ ಸಮತೋಲನವಾಗಿದ್ದರೂ ಬೆಲೆ ಏರಿಸಿದೆ. ಮುಂದೆ ಬಸ್, ಮತ್ತು ನೀರಿನ ದರ ಏರಿಸಲಿದ್ದು, ಅಭಿವೃದ್ಧಿ ಮರೆತು ವಿವೇಚನೆಯಿಲ್ಲದೆ ತಂದ ಗ್ಯಾರಂಟಿ ಭಾಗ್ಯಗಳಿಗೆ ಹಣ ಕ್ರೂಡೀಕರಿಸುತ್ತಾ ಕೇವಲ ಅಧಿಕಾರಕ್ಕೆ ಅಂಟಿಕೊಂಡಿದೆ ಎಂದರು. ಕಾಂಗ್ರೆಸ್ ಜನರಿಂದ ಹಗಲು ದರೋಡೆ ಮಾಡುತ್ತಿದೆ. ಅಭಿವೃದ್ಧಿಗೆ ಹಣವಿಲ್ಲದೆ ಸ್ವಪಕ್ಷದ ಶಾಸಕರು ಗೋಗೆರೆದರೂ ಹಣ ನೀಡದೆ ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಕತ್ತಲೆಗೆ ನೂಕಿದ್ದು, ರೈತರಿಗೆ ಪರಿಹಾರ ನೀಡುವ ಯೋಗ್ಯತೆ ಇಲ್ಲ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿ, ಜನರು ಕೇಳದಿದ್ದರೂ ಅಧಿಕಾರಕ್ಕಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿದೆ. ಕಾಂಗ್ರೆಸ್ ಈಗ ಸರ್ಕಾರ ನಡೆಸಲು ಹಣವಿಲ್ಲದೆ ಪೆಟ್ರೋಲ್ ,ಡೀಸಲ್ ಬೆಲೆ ಏರಿಸಿ ಜನರಿಗೆ ಆರ್ಥಿಕ ಹೊರೆ ಹೊರಿಸಿದೆ. ಇಂತಹ ಸರ್ಕಾರಕ್ಕೆ ಮುಂದೆ ಜನರೇ ಬುದ್ದಿ ಕಲಿಸಬೇಕಿದೆ ಎಂದರು.ತಾಲೂಕು ಮಂಡಲಾಧ್ಯಕ್ಷ ನಾಗೇಂದ್ರ ಮಾತನಾಡಿ, ರಾಜ್ಯದ ಭ್ರಷ್ಠ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಸಿ ಜನರ ಹಾಗೂ ಅಭಿವೃದ್ಧಿ ವಿರೋಧಿಯಾಗಿದೆ. ಒಂದು ವರ್ಷದಿಂದ ಅಭಿವೃದ್ಧಿಗೆ ಕೊಟ್ಟಿದ್ದು ತೆಂಗಿನ ಚಿಪ್ಪು ಜನರ ಕಿವಿಗೆ ಹೂವು ಮೂಡಿಸುವ ಇವರ ಸಾಧನೆ, ಇದೊಂದು ಅಹಿಂದ ಹಾಗೂ ರೈತರ ವಿರೋಧಿ ಸರ್ಕಾರವಾಗಿದೆ ಎಂದರು.
ನೊಂದಣಿ, ಅಬಕಾರಿ ಸೇರಿದಂತೆ ಎಲ್ಲ ಸುಂಕಗಳನ್ನು ಹೆಚ್ಚಿಸಿದೆ. ಆದರೆ ಉಚಿತವಾಗಿ ನೀಡುವ ಶಿಕ್ಷಣ ,ಆರೋಗ್ಯ ಸೇವೆ ಕಡೆಗಣಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೆರೆಯ ಆಂಧ್ರದ ಜಗಮೋಹನ್ ರೆಡ್ಡಿ ಸರ್ಕಾರಕ್ಕೆ ಆದ ಗತಿಯೇ ಬರಲಿದೆ ಎಂದರು.ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ನಾಗರಾಜಪ್ಪ, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಶಿವಕುಮಾರಸ್ವಾಮಿ, ಮಹಿಳಾ ಅಧ್ಯಕ್ಷೆ ಲತಾಪ್ರದೀಪ್, ರತ್ನಮ್ಮ, ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್, ಖಜಾಂಚಿ ಶ್ರೀನಿವಾಸ್, ಮುಖಂಡರಾದ ಅರುಣ್, ರವಿ, ತೇಜಸ್, ಮಂಜುನಾಥ್, ಮಲ್ಲಿಕಾರ್ಜುನಪ್ಪ ಭಾಗವಹಿಸಿದ್ದರು.