ಕನ್ನಡಪ್ರಭ ವಾರ್ತೆ ಬನ್ನೂರು
ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಆರೋಗ್ಯ ತಪಾಸಣೆ, ರಕ್ತದಾನ, ನಿರ್ಗತಿಕರಿಗೆ ಸಹಾಯ ಮುಂತಾದ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಚಿತ್ರನಟ ನೆನಪಿರಲಿ ಪ್ರೇಮ್ ಹೇಳಿದರು.ಮೈಸೂರಿನ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಬನ್ನೂರಿನ ರೋಟರಿ ಸಂಸ್ಥೆ, ಗ್ರೀನ್ ಲ್ಯಾಂಡ್ ಸಂಸ್ಥೆ ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾನ್ ಸಿಂಗ್ ರಾಜ್ಪುರೋಹಿತ್ ಅವರ 15ನೇ ವರ್ಷದ ಪುಣ್ಯಸ್ಮರಣೆಯ ಕಣ್ಣಿನ ತಪಾಸಣೆಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾನು ವಾಸ ಮಾಡುವ ಪ್ರದೇಶದ ಜನರ ಋಣ ತೀರಿಸಬೇಕೆನ್ನುವ ಭಾವನೆ ಎಲ್ಲರಲ್ಲೂ ಮೂಡಿದಾಗ ಸಹಕಾರ ಮನೋಭಾವ ಮೂಡುವುದಾಗಿ ತಿಳಿಸಿದ ಅವರು, ಮನುಷ್ಯನಿಗೆ ಎಲ್ಲ ಅಂಗಗಳಿಗಿಂತ ಮುಖ್ಯವಾಗಿ ನೇತ್ರ ಮುಖ್ಯ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಉಚಿತವಾಗಿ ಆಯೋಜನೆ ಮಾಡಿರುವ ನೇತ್ರ ತಪಾಸಣೆಯ ಶಿಬಿರ ಕತ್ತಲೆಯ ಜೀವಕೆ ಬೆಳಕನ್ನು ನೀಡುವಂತಾಗಲಿ, ನಮ್ಮ ಸುಂದರ ಪರಿಸರ ಕಾಣುವಂತಾಗಲಿ ಎಂದು ಆಶಿಸಿದರು.ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ತಮ್ಮ ತಂದೆ ಕಾನ್ ಸಿಂಗ್ ರಾಜ್ ಪುರೋಹಿತ್ ಅವರ 15ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ನೇತ್ರ ತಪಾಸಣೆಯ ಶಿಬಿರವನ್ನು ಇಲ್ಲಿ ಆಯೋಜನೆ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಉಳ್ಳವರಿಗೆ ಕೊಯಮತ್ತೂರಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆಯ ನಂತರ ಪುನಃ ಹಿಂದಿರುಗಿ ಕರೆತರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುತ್ತಿದ್ದು, ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಗೌರಿದೇವಿ ಕಾನ್ ಸಿಂಗ್, ರಾಜೇಶ್ ಸಿಂಗ್, ವನ್ಯಸಿಂಗ್, ವಿರಾಟ್ ಸಿಂಗ್, ಡಾ. ಗುರುಬಸವರಾಜು, ರೋಟರಿ ಅಧ್ಯಕ್ಷ ಕೃಷ್ಣೇಗೌಡ, ಡಾ. ವಿಕಾಸ್, ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್, ಪ್ರಾಂಶುಪಾಲ ರಂಗನಾಥ್ ಇದ್ದರು.