ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಟಿಪ್ಪು ಸತ್ತು ಎಷ್ಟೋ ವರ್ಷದ ನಂತರ ಕೆಆರ್‌ಎಸ್ ಜಲಾಶಯವನ್ನು ನಾಡಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿದ್ದರು. ಅಣೆಕಟ್ಟೆ ನಿರ್ಮಾಣದಲ್ಲಿ ಟಿಪ್ಪು ಹೆಸರು ತರುವುದು ಸರಿಯಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಗೌರಿ ಗಣೇಶಬನ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಲ್ವಡಿ ಒಡೆಯರ್ ಅವರು ತಮ್ಮ ಒಡವೆ ಮಾರಾಟ ಮಾಡಿ ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿ ಈ ನಾಡಿನ ಜನರ ಶ್ರೇಯೋಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದು ಎಲ್ಲರ ಬಾಯಲ್ಲಿದೆ. ಅದಕ್ಕೆ ಬಣ್ಣ ಕಟ್ಟಿ ಟಿಪ್ಪು ಹೆಸರನ್ನು ಪ್ರಸ್ತಾಪಿಸುವುದು ಸಚಿವ ಮಹದೇವಪ್ಪ ಅವರಿಗೆ ಶೋಭೆಯಲ್ಲ ಎಂದರು.ಈ ನಾಡಿನಲ್ಲಿ ನಾಲ್ವಡಿಯವರ ಸೇವೆ ಮನುಷ್ಯನ ಜೀವತಾವಧಿ ಕೊನೆಯವರೆಗೂ ನೆನಪಿನಲ್ಲಿ ಉಳಿಯಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದರೆ ರಾಜ್ಯದ ಜನರಿಗೆ ಇನ್ನೂ ಹೆಚ್ಚು ಸೇವೆ ಒದಗಿಸಲಿದೆ ಎಂದರು.
ಗೌರಿ ಹಬ್ಬದಂದು ಮುತ್ತೈದೆರಿಗೆ ಬಾಗಿನ ಕೊಡುವುದು ಸಂಬಂಧ ಬೆಸೆಯುವ ಈ ದೇಶದ ಸುಸಂಸ್ಕೃತಿಯ ಪ್ರತೀಕ. ಯುವ ನಾಯಕ ಇಂಡುವಾಳು ಸಚ್ಚಿದಾನಂದ ಕಾರ್ಯಕ್ರಮ ಆಯೋಜಿಸಿದ್ದ ಮಹಿಳೆಯರಿಗೆ ಬಾಗಿನ ನೀಡಿ ತಾಯಿ ಮತ್ತು ಸಹೋದರಿಯ ಬಾತೃತ್ವವನ್ನು ಕಾಣಬಹುದು ಎಂದರು.ತವರುಮನೆಯಿಂದ ಸೋದರಿಯರಿಗೆ ಸಹೋದರ ಕೊಡುವ ಉಡುಗೊರೆ. ಸಾವಿರಾರು ಮಂದಿ ಸುಮಂಗಲಿಯರಿಗೆ ಇಂದು ಬಾಗಿನ ಕೊಡುತ್ತಿರುವುದು ಹೆಮ್ಮೆಯ ವಿಚಾರ. ತನ್ನ ಕೈಯಲ್ಲಿ ಯಾವುದೇ ಅಧಿಕಾರ ಆಡಳಿತವಿಲ್ಲದಿದ್ದರೂ ಸಚ್ಚಿದಾನಂದ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸಿದ್ದರಾಮಯ್ಯ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ತಾಲೂಕು ಮಂಡಲದ ಅಧಕ್ಷ ಪೀಹಳ್ಳಿ ರಮೇಶ್, ಬಿಜೆಪಿ ಜಿಲ್ಲಾ ಅಧಕ್ಷ ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಶಾಮಿಯಾನ ಪುಟ್ಟರಾಜು, ಪುರಸಭೆ ಸದಸ್ಯರಾದ ಶಿವು ಗಂಜಾಂ, ಕೃಷ್ಣಪ್ಪ, ಎಸ್ ಪ್ರಕಾಶ್, ಶ್ರೀನಿವಾಸ್, ಎಸ್.ಟಿ. ರಾಜು, ದರ್ಶನ್ ಲಿಂಗರಾಜು, ಟ್ರಸ್ಟಿನ ಪದಾಧಿಕಾರಿಗಳು ಇದ್ದರು.