ವ್ಯಾಸಮಹರ್ಷಿ ಸ್ಮರಣೆಗೆ ಕೋಮುಬಣ್ಣ ಬಳಿಯೋದು ಸರಿಯಲ್ಲ: ನಮೋಶಿ

KannadaprabhaNewsNetwork | Published : Jul 23, 2024 12:38 AM

ಸಾರಾಂಶ

ಕಲಬುರಗಿ ಕೇಂದ್ರೀಯ ವಿವಿ ಕ್ಯಾಂಪಸ್ಸಲ್ಲಿ ನಡೆದಿರೋದು ವ್ಯಾಸಮಹರ್ಷಿ ಸ್ಮರಣೆಯ ಗುರುಪೂಜೆ, ಅದಕ್ಕೆ ಕೋಮುಬಣ್ಣ ಬಳಿಯೋದು ಸರ್ವಥಾ ಸರಿಯಲ್ಲವೆಂದು ಬಿಜೆಪಿ ಎಂಎಲ್‌ಸಿ ಹಾಗೂ ಹೈಕಶಿ ಸಂಸ್ಥೆಯ ಶಶಿಲ್‌ ನಮೋಶಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಕೇಂದ್ರೀಯ ವಿವಿ ಕ್ಯಾಂಪಸ್ಸಲ್ಲಿ ನಡೆದಿರೋದು ವ್ಯಾಸಮಹರ್ಷಿ ಸ್ಮರಣೆಯ ಗುರುಪೂಜೆ, ಅದಕ್ಕೆ ಕೋಮುಬಣ್ಣ ಬಳಿಯೋದು ಸರ್ವಥಾ ಸರಿಯಲ್ಲವೆಂದು ಬಿಜೆಪಿ ಎಂಎಲ್‌ಸಿ ಹಾಗೂ ಹೈಕಶಿ ಸಂಸ್ಥೆಯ ಶಶಿಲ್‌ ನಮೋಶಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದಿನಿಂದಲೂ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಗಣೇಶ ಉತ್ಸವ, ಸರಸ್ವತಿಪೂಜಾ ಉತ್ಸವ, ಗುರುಪೂಜಾ ಉತ್ಸವ ಹಾಗೂ ರಾಷ್ಟ್ರ ನಾಯಕರ ಪೂಜೆ ಸಾಮಾನ್ಯ. ಇದು ಭಾರತದ ವಿವಿಧತೆಯಲ್ಲಿ ಏಕತೆ ಪರಂಪರೆಗೆ ಸಾಕ್ಷಿ. ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಎಲ್ಲ ಧರ್ಮದ ಎಲ್ಲ ಜಾತಿಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ, ಅಲ್ಲಿ ಜಾತಿ ಆಧಾರದಲ್ಲಿ ಮಕ್ಕಳನ್ನು ನೋಡಲಾಗೋದಿಲ್ಲ.

ಆದರೆ ರಾಜ್ಯದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ನಡೆದಿರುವ ವ್ಯಾಸ ಮಹರ್ಷಿಗಳ ಸ್ಮರಣೆಯ ಗುರುಪೂಜಾ ಮಹೋತ್ಸವವನ್ನು ಕೋಮುವಾದಿ ಉತ್ಸವ ಎಂದು ಬಣ್ಣಹಚ್ಚಿ ವಿವಾದಗೊಳಿಸುತ್ತಿರುವ ಕಾಂಗ್ರೆಸ್‌ ಪಕ್ಷ ಹಾಗೂ ಪ್ರಗತಿಪರರು ಎಂದು ಹೇಳಿಕೊಳ್ಳುವವರ ನಿಲುವು ಸರಿಯಲ್ಲ ಎಂದು ನಮೋಶಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಗುರುಪೂಜಾ ಆಚರಣೆಗೆ ತನ್ನದೆಯಾದ ಇತಿಹಾಸವಿದೆ. ಶಿಕ್ಷಕರನ್ನು ಗುರುವಿನ ರೂಪದಲ್ಲಿ ಕಾಣುತ್ತೆವೆ, ಗೌರವಿಸುತ್ತೆವೆ. ವ್ಯಾಸ ಮಹರ್ಷಿಗಳ ಸ್ಮರಣೆಯಂದು ವಿದ್ಯೆನೀಡಿದ ಗುರುಗಳಿಗೆ ಗೌರವಿಸುತ್ತೆವೆ. ಕೇಂದ್ರಿಯ ವಿಶ್ವವಿದ್ಯಾಲಯ ಭಾರತದ ವಿವಿಧ ರಾಜ್ಯಗಳ ಭಾಷೆಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರವರ ಸದಿಚ್ಛೇಯ ಮೇರೆಗೆ ಅವರವರ ಆಚರಣೆಗಳಿಗೆ ಶಿಕ್ಷಣ ಸಂಸ್ಥೆಗಳು ಅನುಮತಿ ನೀಡುತ್ತಿವೆ.ಆಚರಣೆಗಳನ್ನು ಮಾಡುವುದು ಅವರ ಮೂಲಭೂತ ಹಕ್ಕು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಗುರುಪೂಜಾ ಉತ್ಸವವನ್ನು ಧರ್ಮದ ಹೆಸರಿನಲ್ಲಿ ರಾಜಕೀಯಗೋಳಿಸುತ್ತಿರುವದು ಸರಿಯಾದ ಕ್ರಮವಲ್ಲ.

ಭಾವೈಕ್ಯತೆಯ ಕೇಂದ್ರವಾಗಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುಭಾವನೆಯ ವಿಷಬೀಜ ಬಿತ್ತುತ್ತಿರುವದು ಸರಿಯಲ್ಲ. ಇದನ್ನು ನೋಡಿದರೆ ಕಾಂಗ್ರೆಸ್‌ ಪಕ್ಷ ಗುರುಪರಂಪರೆಗೆ ವೀರೋಧ ಇದೇಯಾ? ಅಥವಾ ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದೆಯೋ ತಿಳಿಯುತ್ತಿಲ್ಲವೆಂದು ನಮೋಶಿ ಕಾಂಗ್ರೆಸ್‌ ಹಾಗೂ ಪ್ರಗತಿಪರರನ್ನು ದೂಷಿಸಿದ್ದಾರೆ.

ಕಾಂಗ್ರೆಸ್‌ ಪರಂಪರೆಗೆ ವಿರೋಧವಿದ್ರೆ ಹೇಳಲಿ: ಇತ್ತಿಚಿನ ದಿನಗಳಲ್ಲಿ ಈ ಸರ್ಕಾರ ಬಂದ ನಂತರ ಅನೇಕ ಹಿಂದೂ ಧರ್ಮಗಳ ಆಚರಣೆಗಳಿಗೆ ವಿರೋಧ ವ್ಯಕ್ತಪಡಿಸಿ ಅವಕಾಶವು ನೀಡುತ್ತಿಲ್ಲ. ಹಾಗಾದರೆ ಕಾಂಗ್ರೆಸ್‌ ಪಕ್ಷ ಭಾರತೀಯ ಪರಂಪರೆಗಳ ಆಚರಣೆಗಳಿಗೆ ವಿರೋಧವಿದೆ ಎಂದು ತಿಳಿಯುತ್ತಿದೆ.

ಸರ್ಕಾರ ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮಗಳಿಗೆ ಬೆಂಬಲಿಸುವುದನ್ನು ಬಿಟ್ಟು ಕೇವಲ ರಾಜಕಾರಣಕ್ಕೋಸ್ಕರ ವಿರೋಧಿಸುವುದು ಕೋಮುಭಾವನೆ ಬೆಳೆಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕಾರ್ಯವನ್ನು ನಮೋಶಿ ಉಗ್ರವಾಗಿ ಖಂಡಿಸಿದ್ದಾರೆ.

Share this article