18 ಶಾಸಕರನ್ನು ಅಮಾನತು ಮಾಡಿದ್ದು ಸರಿಯಲ್ಲ

KannadaprabhaNewsNetwork | Published : Mar 23, 2025 1:31 AM

ಸಾರಾಂಶ

ಹನಿಟ್ರ್ಯಾಪ್ ಪ್ರಕರಣ ತನಿಖೆಗೊಪ್ಪಿಸುವಂತೆ ಸ್ವತಃ ಗೃಹ ಮಂತ್ರಿಯೇ ಮನವಿ ಮಾಡುವ ಮಟ್ಟಕ್ಕೆ ತಲುಪಿರುವುದು ರಾಜ್ಯದಲ್ಲಿ ಊಹೆ ಮಾಡಲಾಗದ ಆತಂಕಕಾರಿ ಸಂಗತಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹನಿಟ್ರ್ಯಾಪ್ ಪ್ರಕರಣ ತನಿಖೆಗೊಪ್ಪಿಸುವಂತೆ ಸ್ವತಃ ಗೃಹ ಮಂತ್ರಿಯೇ ಮನವಿ ಮಾಡುವ ಮಟ್ಟಕ್ಕೆ ತಲುಪಿರುವುದು ರಾಜ್ಯದಲ್ಲಿ ಊಹೆ ಮಾಡಲಾಗದ ಆತಂಕಕಾರಿ ಸಂಗತಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಂತ್ರಿಯೇ ಹನಿಟ್ರ್ಯಾಪ್ ಬಗ್ಗೆ ತಮ್ಮದೇ ಪಕ್ಷದ ಸಚಿವರ ವಿರುದ್ಧ ದೂರು ಕೊಟ್ಟಿದ್ದು ಆತಂಕದ ಸಂಗತಿಯಾಗಿದ್ದು, ಇದಂತೂ ಊಹೆ ಮಾಡಲಾಗದ ಆತಂಕಕಾರಿ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಅದನ್ನು ತನಿಖೆಗೊಪ್ಪಿಸುವಂತೆ ಗೃಹ ಸಚಿವರೇ ಸದನದಲ್ಲಿ ಹೇಳುವ ಮಟ್ಟಕ್ಕೆ ತಲುಪಿದೆ ಎಂದರು.

18 ಜನ ವಿಪಕ್ಷವಾದ ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಪಡಿಸುವ ಮಟ್ಟಕ್ಕೂ ಕಾಂಗ್ರೆಸ್ ಸರ್ಕಾರದವರು ಬಂದಿದ್ದಾರೆ. ಸಭಾಪತಿ ಮುತ್ಸದ್ದಿಯಾಗಿದ್ದು, ಅಂತಹವರ ಈ ನಿರ್ಧಾರ ದುರಂತದ ಕ್ರಮವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಕ್ರಮಕ್ಕೆ ಖಂಡಿಸಿದರು. ರಾಜ್ಯದ ಆಡಳಿತ ಪಕ್ಷದ ಕೆಲವರ ಬಳಿ ಸಿಡಿ ಫ್ಯಾಕ್ಟರಿಯೇ ಇದೆಯೆಂದು ಆರೋಪಿಸಿದ ಬಿಜೆಪಿ ಶಾಸಕರನ್ನೇ ಆರು ತಿಂಗಳ ಕಾಲ ಸದನದಿಂದ ಸಸ್ಪೆಂಡ್ ಮಾಡಲಾಗಿದೆ. ಸ್ಪೀಕರ್ ಹುದ್ದೆ ಅತ್ಯಂತ ಪವಿತ್ರವಾದದ್ದು. ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರನ್ನು ಒಂದಾಗಿ ತೆಗೆದುಕೊಂಡು ಹೋಗಬೇಕಾಗಿರುವುದು ಸ್ಪೀಕರ್ ಹೊಣೆಗಾರಿಕೆಯಾಗಿದೆ. ಆದರೆ, ಸಿಡಿ ಪ್ರಕರಣವನ್ನು ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ ವಿಪಕ್ಷದ 18 ಶಾಸಕರನ್ನೇ ಅಮಾನತುಪಡಿಸುವ ಕೆಲಸ ಮಾಡುತ್ತಾರೆ ಎಂದು ಸ್ಪೀಕರ್ ಕ್ರಮಕ್ಕೆ ಆಕ್ಷೇಪಿಸಿದರು.

ಸ್ಪೀಕರ್ ಸ್ಥಾನದಲ್ಲಿ ಕುಳಿತವರು ಒಂದು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಒಂದಾಗಿ ನೋಡುವುದನ್ನು ಬಿಟ್ಟು, 18 ಜನ ವಿಪಕ್ಷ ಶಾಸಕರನ್ನು ಅಮಾನತುಪಡಿಸಿದ್ದು ಸರಿಯಲ್ಲ. ಇದೇ ರೀತಿ ಸಂವಿಧಾನ ವಿರೋಧಿಯಾಗಿ ಮುಸ್ಲಿಂ ಸಮಾಜಕ್ಕೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗಿದ್ದು, ಇದು ಸರಿಯಲ್ಲ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅ‍ವಕಾಶವೇ ಇಲ್ಲ. ಸಂವಿಧಾನದ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹರಿಹಾಯ್ದರು.

ಯತ್ನಾಳ್‌- ಬಿವೈವಿ ಸಂಘರ್ಷ ಮುಕ್ತಾಯ: ದಾವಣಗೆರೆ: ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಸಂಘರ್ಷ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆಯುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಳೆ ಬರುವ ಮುನ್ನ ಗುಡುಗು, ಸಿಡಿಲು ಸಹಜ. ಅದೇ ರೀತಿ ಪಕ್ಷದಲ್ಲಿ ಇಷ್ಟು ದಿನ ಗುಡುಗು-ಸಿಡಿಲು ಆಗಿದ್ದು, ಈಗ ಮಳೆ ಬಂದಂತೆ ಯತ್ನಾಳ್-ವಿಜಯೇಂದ್ರ ಮಧ್ಯೆ ಇದ್ದ ಸಂಘರ್ಷವೂ ಮುಕ್ತಾಯವಾಗಿದೆ. ಕೇಂದ್ರದಲ್ಲಿ ನಮ್ಮದು ಬಲಿಷ್ಟ ನಾಯಕತ್ವವಿದ್ದು, ಎಲ್ಲವೂ ಸರಿಯಾಗಿದೆ. ವಿಪಕ್ಷವಾಗಿ ರಾಜ್ಯ ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

Share this article