ಕುಡಿತಕ್ಕೆ ಪ್ರಚೋದನೆ ನೀಡುವುದು ಸರಕಾರದ ಕೆಲಸವಲ್ಲ-ಎಚ್.ಕೆ. ಪಾಟೀಲ ಕನ್ನಡಪ್ರಭ ವಾರ್ತೆ ಧಾರವಾಡ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಕುಡಿತವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಾರಾಯಿ ಮಾರಾಟ ಅಡ್ಡಗಾಲಾಗಿದೆ. ಮದ್ಯದ ಅಂಗಡಿ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕಾದರೆ, ಮಧ್ಯದ ಅಂಗಡಿಗಳು ಕಡಿಮೆಯಾಗಬೇಕು. ಸರ್ಕಾರ ಕೂಡ ಮದ್ಯದ ಅಂಗಡಿ ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಸಮಾಜದ ಮತ್ತು ಜನರ ಆರೋಗ್ಯಕ್ಕಿಂತ ಸರ್ಕಾರಕ್ಕೆ ಆದಾಯ ಮುಖ್ಯವಲ್ಲ ಎಂಬುದನ್ನು ನಾವು ಸೇರಿದಂತೆ ಎಲ್ಲರೂ ಅರಿಯಬೇಕು ಎಂದರು. ವಿಧಾನಪರಿಷತ್ ಸದಸ್ಯ ಪ್ರಕಾಶ ರಾಥೋಡ ಅವರ ಜಾತಿ ರಾಜಕಾರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಕೆ. ಪಾಟೀಲ, ಜಾತಿ ಆಧಾರದ ಮೇಲೆ ಸ್ಥಾನಗಳು ಬಂದ ಬಗ್ಗೆ ನಾವು ಚರ್ಚೆ ಮಾಡೋದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರು ಕೂಡ ಮತ ಹಾಕಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಭಾವಿಕವಾಗಿ ಲಿಂಗಾಯತರು ಮತ ಹಾಕಿದ್ದಾರೆ. ಹೆಚ್ಚಿನ ಅಂತರದಿಂದಲೂ ಆಯ್ಕೆಯಾಗಿದ್ದಾರೆ. ಆದರೆ, ರಾಜಕಾರಣದಲ್ಲಿ ಜಾತಿ ಲೆಕ್ಕಾಚಾರ ಸರಿಯಲ್ಲ. ಈ ವಿಷಯದಲ್ಲಿ ಹಿರಿಯರಾದ ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆ ಸ್ಪಷ್ಟತೆ ಇಲ್ಲ. ಮಾಧ್ಯಮಗಳ ಮೂಲಕ ಗೊಂದಲ ಸೃಷ್ಟಿಯಾಗಬಾರದು. ಜಾತಿ ಆಧರಿಸಿ ನಾನು ರಾಜಕೀಯ ಮಾತು ಹೇಳೋದಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇದೆಲ್ಲವೂ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು. ಡಿಸಿಎಂ ಸ್ಥಾನ ಕೊಡುವದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದ್ದರಿಂದ ವಿನಾಕಾರಣ ಗೊಂದಲ ಉಂಟು ಮಾಡಬಾರದು. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಜನಪ್ರಿಯತೆ ಹೆಚ್ಚಿದ್ದು ಬೇರೆ ಪಕ್ಷಗಳಿಗೆ ಹೊಟ್ಟೆ ಉರಿಯಾಗಿದೆ ಎಂದರು.