ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮುಂದಿನ ಪೀಳಿಗೆಗೆ ಪರಿಸರ, ಗಿಡ, ಮರಗಳನ್ನು ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.
ಬುಧವಾರ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಆವರಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿದರು.ಮೂಡಬಾಗಿಲು ಶಾಲೆಯಲ್ಲಿ 8 ನೇ ತರಗತಿ ಮಕ್ಕಳೇ ಗಿಡ ನೆಟ್ಟು 3 ವರ್ಷ ಆ ಮಕ್ಕಳೇ ಆ ಗಿಡಗಳನ್ನು ಸಂರಕ್ಷಿಸುವ ಯೋಜನೆ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯವರು ರೂಪಿಸಿರುವುದು ಉತ್ತಮ ಕಾರ್ಯ. ಮಕ್ಕಳೇ ನೆಟ್ಟು, ಸಂರಕ್ಷಿಸಿದ ಗಿಡಗಳನ್ನು ಮುಂದಿನ 10 ವರ್ಷಗಳಲ್ಲಿ ಅದೇ ಮಕ್ಕಳು ಬಂದು ನೋಡಿದಾಗ ಮಕ್ಕಳಿಗೆ ಖುಷಿಯಾಗಲಿದೆ. ಇದರ ಜೊತೆಗೆ ಗಿಡ ಸಂರಕ್ಷಣೆ ಮಾಡುವ ಕಷ್ಟಗಳನ್ನು ಸಹ ಅರಿತು ಕೊಳ್ಳುತ್ತಾರೆ. ಮುಂದಿನ ವರ್ಷ ಶಾಲಾ ವಾರ್ಷಿಕೋತ್ಸವದಲ್ಲಿ ನಾನು ಬಂದು ಉತ್ತಮ ಗಿಡ ಪೋಷಣೆ ಮಾಡಿದ 3 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುತ್ತೇನೆ ಎಂದು ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಮೂಡಬಾಗಿಲು ಜ್ಞಾನ ಗಂಗೋತ್ರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೇಸಿ ಸಂಸ್ಥೆ ವಿನೂತನ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಈ ಶಾಲೆಗೆ 8 ನೇ ತರಗತಿಗೆ ದಾಖಲಾದ ಪ್ರತಿ ವಿದ್ಯಾರ್ಥಿ 1 ಗಿಡ ನೆಟ್ಟು ಎಸ್‌ಎಸ್‌ಎಲ್ ಸಿ ಯವರೆಗೆ ಒಟ್ಟು 3 ವರ್ಷ ಆ ಗಿಡ ಪೋಷಣೆ ಮಾಡಬೇಕು. ಆ ಗಿಡಕ್ಕೆ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಹೆಸರೇ ನಾಮಕರಣ ಮಾಡಲಾಗುತ್ತದೆ. ಇಂತಹ ಯೋಜನೆ ರೂಪಿಸಲು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ಸ್ಪೂರ್ತಿ ನೀಡಿದ್ದಾರೆ. ಜ್ಞಾನ ಗಂಗೋತ್ರಿ ಶಾಲೆಯವರು ಅವಕಾಶ ಮಾಡಿ ಕೊಟ್ಟಿದ್ದಾರೆ. ಮುಂದಿನ 3 ವರ್ಷಗಳ ಕಾಲ ಗಿಡಕ್ಕೆ ಬೇಕಾದ ಗೊಬ್ಬರವನ್ನು ನಾನು ಉಚಿತವಾಗಿ ನೀಡುತ್ತೇನೆ ಎಂದರು.ಅರಳಿಕೊಪ್ಪ ಉಪ ವಲಯ ಅರಣ್ಯಾಧಿಕಾರಿ ಸುರೇಶ ರೆಡ್ಡಿ ಮಾತನಾಡಿ, ಪ್ರಸ್ತುತ ಜನ ಸಂಖ್ಯೆ ಹೆಚ್ಚಾಗಿದೆ. ನಗರಗಳು ಬೆಳೆಯುತ್ತಿದ್ದು ಅರಣ್ಯ ಕಡಿಮೆಯಾಗುತ್ತಿದೆ. ಎಲ್ಲಿ ಜಾಗ ಖಾಲಿ ಇದೆಯೋ ಅಲ್ಲಿ ಗಿಡಗಳನ್ನು ನೆಡ ಬೇಕು. ಇದರಿಂದ ಜಾಗತಿಕ ತಾಪಮಾನ ಕಡಿಮೆಯಾಗಲಿದೆ. ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಆವರಣದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ಶಾಲಾ ಆವರಣದಲ್ಲಿ ಪೇರಳೆ ನೇರ್ಲೆ, ನೆಲ್ಲಿಕಾಯಿ, ಸಂಪಿಗೆ, ಚೆರಿ ಮುಂತಾದ ಗಿಡಗಳನ್ನು ನೆಡಲಾಯಿತು. ಸಭೆಯಲ್ಲಿ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್, ಜ್ವಾಲಾ ಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ವಿನೂತ್, ಖಜಾಂಚಿ ಜೀವನ್,ಸಹ ಕಾರ್ಯದರ್ಶಿ ಪವನ್, ವಲಯ ಅಧಿಕಾರಿ ಚರಣರಾಜ್, ಪದಾಧಿಕಾರಿ ವಿನಯ್, ಪ್ರೀತಂ, ಗಸ್ತು ಅರಣ್ಯಪಾಲಕರಾದ ಎಂ.ಡಿ.ನಾಗರಾಜ, ಬೀಮಪ್ಪ, ಶಂಕ್ರಪ್ಪ, ಶಾಲೆ ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.