ಕಡೆವಿನ ಕೋಲಾಟ ಪ್ರದರ್ಶನ ಉದ್ಘಾಟಿಸಿದ ಪ್ರಗತಿಪರ ಕೃಷಿಕ
ಇಂದಿನ ತಂತ್ರಜ್ಞಾನದ ದಿನದಲ್ಲಿ ನಮ್ಮ ನಾಡಿನ ಜಾನಪದ ಕಲೆ ಹಾಗೂ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿವೆ. ಜಾನಪದ ಕಲೆ ಹಾಗೂ ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರ ನರಸಿಂಹ ಹೆಗಡೆ ಹೊನ್ನೆಹದ್ದ ಹೇಳಿದರು. ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದದ ಶ್ರೀ ಮಾವಿನಕಟ್ಟೆ ಭೂತೇಶ್ವರ ಸ್ವಾಮಿಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಡೆವಿನ ಕೋಲಾಟ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಡೆವಿನ ಕೋಲಾಟದ ನಿರ್ಣಾಯಕರಾಗಿ ಆಗಮಿಸಿದ್ದ ಉಪನ್ಯಾಸಕ ಎನ್.ಟಿ. ನಾಯ್ಕ ದೇವಾಸ ಮಾತನಾಡಿ ಗ್ರಾಮೀಣ ಸೊಗಡಿನ ಮಹತ್ವವನ್ನು ಹೊಂದಿರುವ ಅನೇಕ ಜನಪದ ಕಲೆಗಳು, ಕ್ರೀಡೆಗಳಿಂದ ಜನತೆ ದೂರವಾಗುತ್ತಿದ್ದಾರೆ. ಇಂತಹ ಕಲೆಗಳು ಉಳಿಯಬೇಕಾದರೆ ಸಂಘಟನೆ ಅವಶ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ನಾಟಿ ವೈದ್ಯ ಕೆ.ಟಿ. ಗೌಡ ಮಾದಲಮನೆ ಮಾತನಾಡಿದರು.
ದೀಪಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರೂಪಿಸಿದರು. ಭೂತೇಶ್ವರ ಸ್ವಾಮಿ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರು ಸಹಕರಿಸಿದರು.