ಕನ್ನಡಪ್ರಭ ವಾರ್ತೆ ಉಡುಪಿಸಮಾಜದಲ್ಲಿ ಪ್ರತಿಯೊಬ್ಬರು ಸಹೋದರಂತೆ, ಅನೋನ್ಯತೆ ಮತ್ತು ಸಹಕಾರದ ಮನೋಭಾವವನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಏಕತೆ ಮತ್ತು ಒಗ್ಗಟ್ಟಿನ ಬಲಿಷ್ಠ ಸಮುದಾಯ ಕಟ್ಟಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ದೇವಾಲಯ ಕ್ರೈಸ್ತರ ಮೊದಲ ಕುಟುಂಬ ಎನ್ನುವುದನ್ನು ಗಮನದಲ್ಲಿರಿಸಿ, ಒಗ್ಗಟ್ಟನ್ನು ಪ್ರದರ್ಶಿಸಿದಾಗ ನಮ್ಮಲ್ಲಿನ ಸಹೋದರತ್ವ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ. ಆಧುನಿಕ ಜಗತ್ತಿನಲ್ಲಿ ನಮ್ಮನ್ನು ಬೇರ್ಪಡಿಸುವ ಹಲವು ದಾರಿಗಳಿದ್ದರೂ ಕೂಡ ಒಂದಾಗಿ ಬಾಳಲು ಸಮುದಾಯದ ದಿನಾಚರಣೆ ದಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂತ ಅನ್ನಮ್ಮನವರ ದೇವಾಲಯದ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಚರ್ಚಿನಲ್ಲಿ ಒಟ್ಟು 11 ವಾಳೆಗಳಿದ್ದು, ಅದರಲ್ಲಿನ ಪ್ರತಿ ಕುಟುಂಬದ ಸದಸ್ಯರು ಒಂದೇ ಮನಸ್ಸಿನಿಂದ ಸಮುದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮಲ್ಲಿರುವ ಒಗ್ಗಟ್ಟನ್ನು ಸೂಚಿಸುತ್ತದೆ. ನಮ್ಮ ಪ್ರತಿಯೊಬ್ಬರ ಕೇಂದ್ರ ಬಿಂದು ಯೇಸು ಕ್ರಿಸ್ತರಾಗಿದ್ದು, ನಮ್ಮ ನಮ್ಮ ವಾಳೆಗಳಲ್ಲಿ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಸ್ವಸ್ಥ ಸಮುದಾಯ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.ಉಡುಪಿ ಧರ್ಮಪ್ರಾಂತ್ಯ ಶ್ರೇಷ್ಠ ಗುರುವಾಗಿ ನೇಮಕಗೊಂಡ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರನ್ನು ಧರ್ಮಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚರ್ಚಿನ ತರಬೇತಿ ಗುರು ವಂ.ಸ್ಟೀಫನ್ ರೊಡ್ರಿಗಸ್, ಸಂತ ಅನ್ನಮ್ಮ ಕಾನ್ವೆಂಟ್ ಇದರ ಮುಖ್ಯಸ್ಥರಾದ ಸಿಸ್ಟರ್ ಪ್ರೆಸಿಲ್ಲಾ, ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫರ್ನಾಂಡಿಸ್, ಕಿರು ಕ್ರೈಸ್ತ ಸಮುದಾಯದ ಸಂಯೋಜಕಿ ಶಾಂತಿ ಫರ್ನಾಂಡಿಸ್ ಉಪಸ್ಥಿತರಿದ್ದರು.