ಸಂಘಟಿತ ಹೋರಾಟದಿಂದ ಸಂವಿಧಾನದತ್ತವಾದ ಸವಲತ್ತು ಪಡೆದುಕೊಳ್ಳಲು ಸಾಧ್ಯ : ಎ.ಆರ್.ಕೃಷ್ಣಮೂರ್ತಿ

KannadaprabhaNewsNetwork |  
Published : Apr 21, 2025, 12:57 AM IST
ತಾಲೂಕಿನ ಚಂದಕವಾಡಿಯಲ್ಲಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ (ರಿ) ಚಂದಕವಾಡಿ ಹೋಬಳಿ ಘಟಕವನ್ನು ಉದ್ಘಾಟಿಸಿ | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಸಮುದಾಯದ ರೈತರು ಈಗಾಗಲೇ ಭೂಮಿ ಪಡೆದುಕೊಂಡು ಜಮೀನ್ದಾರರಾಗಿದ್ದು, ಸಂಘಟಿತ ಹೋರಾಟದಿಂದ ಮಾತ್ರ ನ್ಯಾಯ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಟ ಜಾತಿ ಸಮುದಾಯದ ರೈತರು ಈಗಾಗಲೇ ಭೂಮಿ ಪಡೆದುಕೊಂಡು ಜಮೀನ್ದಾರರಾಗಿದ್ದು, ಸಂಘಟಿತ ಹೋರಾಟದಿಂದ ಮಾತ್ರ ನ್ಯಾಯ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಚಂದಕವಾಡಿಯಲ್ಲಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ, ಚಂದಕವಾಡಿ ಹೋಬಳಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಂದಕವಾಡಿ ಭಾಗದಲ್ಲಿರುವ ಸಿದ್ದಯ್ಯನಪುರ ಗ್ರಾಮಸ್ಥರು ಕೃಷಿಯಲ್ಲಿ ಹೆಚ್ಚು ಪ್ರಖರತೆಯನ್ನು ಪಡೆದುಕೊಂಡಿದ್ದಾರೆ. ಸುವರ್ಣವತಿ, ಚಿಕ್ಕಹೊಳೆ ಜಲಾಶಯ ನಿರ್ಮಾಣ ಹಾಗೂ ಈ ಭಾಗದ ರೈತರಿಗೆ ನಮ್ಮ ಪೂಜ್ಯ ತಂದೆಯವರಾದ ಬಿ. ರಾಚಯ್ಯ ಅವರು ಅರಣ್ಯ ಸಚಿವರಾಗಿದ್ದಾಗ ತಲಾ ೪ ಎಕರೆ ಅರಣ್ಯ ಜಮೀನು ಕೊಡಿಸಿದ ಪರಿಣಾಮ ಎಲ್ಲಾ ವರ್ಗಗಳ ಬಡ ಕೂಲಿ ಕಾರ್ಮಿಕರು ಇಂದು ಭೂ ಮಾಲೀಕರಾಗಿದ್ದಾರೆ. ಮಂಡ್ಯ ಜಿಲ್ಲೆಯನ್ನು ಮೀರಿಸುವಷ್ಟರ ಮಟ್ಟಿಗೆ ನಮ್ಮ ರೈತರು ಬೆಳೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮೈಸೂರು ರಾಜ ಮನೆತನದ ಪ್ರಮೋದಿನಿ ದೇವಿ ಅವರು ಈಗ ಈ ಜಮೀನು ನಮ್ಮದು ಎಂದು ಅರ್ಜಿ ಸಲ್ಲಿಸಿದ್ದರು. ಬಳಿಕ ಅವರೇ ಸಿದ್ದಯ್ಯನಪುರ ಗ್ರಾಮದ ರೈತರಿಗೆ ತೊಂದರೆ ನೀಡುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ, ಇದೆಲ್ಲವನ್ನು ಸಂವಿಧಾನ ದತ್ತವಾಗಿ ಸರ್ಕಾರ ರೈತರಿಗೆ ನೀಡಿದೆ. ಅಂದಿನ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರಿಗೆ ಸಾಗುವಳಿ ಚೀಟಿ, ಹದ್ದುಬಸ್ತು ನೀಡಿದೆ. ಸುಮಾರು ೬೦ ವರ್ಷಗಳಿಂದ ಉಳುಮೆ ಮಾಡಲಾಗುತ್ತಿದೆ. ಬಹಳಷ್ಟು ರೈತರ ಹೆಸರಿಗೆ ಆರ್‌ಟಿಸಿ ಬಂದಿಲ್ಲ. ಈ ತೊಂದರೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮೆಲ್ಲರ ಹೋರಾಟ ಮುಂದುವರಿಯಲಿ. ನಿಮ್ಮೆಲ್ಲರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

ಚಂದಕವಾಡಿ ಹೋಬಳಿಯಿಂದ ಆರಂಭವಾಗಿರುವ ಈ ರೈತ ಸಂಘಟನೆ ತಾಲೂಕು, ಜಿಲ್ಲಾ, ರಾಜ್ಯ ವ್ಯಾಪ್ತಿಯಲ್ಲಿ ವಿಸ್ತರಣೆಯಾಗಲಿ. ಈ ಹಿಂದೆ ಇದ್ದ ರೈತರ ಸಂಘಟನೆಗಳು ಕೆಲವೊಂದು ಸಂದರ್ಭದಲ್ಲಿ ಪರಿಶಿಷ್ಟ ಜಾತಿ ರೈತರ ಪರವಾಗಿ ನಿಂತ ನಿದರ್ಶನಗಳು ಕಡಿಮೆ. ಹೀಗಾಗಿ ನಿಮ್ಮದೇ ಸಂಘಟನೆ ರಚನೆ ಮಾಡಿಕೊಂಡಿರುವುದು ಒಳ್ಳೆಯದು. ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಶಿಕ್ಷಣ, ಸಂಘಟನೆ, ಹೋರಾಟವನ್ನು ಕಲಿಸಿಕೊಟ್ಟಿದ್ದಾರೆ. ಇದೇ ನಮ್ಮ ಅಸ್ತ್ರವಾಗಿದೆ. ಯಾವುದೇ ಗೊಂದಲ ಬೇಡ. ಕೇಂದ್ರ ಸರ್ಕಾರ ರೈತ ವಿರೋಧ ಧೋರಣೆಗಳ ವಿರುದ್ಧ ನಿಮ್ಮ ಹೋರಾಟ ನಿರಂತರವಾಗಿರಲಿ. ದೆಹಲಿಯಲ್ಲಿ ಕಳೆದ ೨ ವರ್ಷಗಳಿಂದ ರೈತರ ಪರವಾದ ಹೋರಾಟ ನಡೆಯುತ್ತಿದೆ. ಆದರೆ, ಈ ಕೇಂದ್ರ ಸರ್ಕಾರ ಜಗ್ಗುತ್ತಿಲ್ಲ. ರೈತ ವಿರೋಧಿ ಸರ್ಕಾರಗಳು ಹೆಚ್ಚು ಕಾಲ ಇದ್ದಷ್ಟು ರೈತ ಸಂಕುಲಕ್ಕೆ ನಷ್ಟವಾಗುತ್ತದೆ ಎಂದು ಕೃಷ್ಣಮುರ್ತಿ ತಿಳಿಸಿದರು.

ಮತ್ತೋರ್ವ ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಸಂಘಟನೆಯನ್ನು ಆರಂಭಿಸಿರುವುದು ಸಂತೋಷ ಸಂಗತಿಯಾಗಿದೆ. ರೈತರಿಗೆ ಯಾವುದೇ ಜಾತಿ ಇಲ್ಲ. ಆದರೆ, ಇತರೆ ಸಂಘಟನೆಗಳು ಮಾಡಿದ ಜಾತಿವಾದಕ್ಕೆ ಈ ಸಂಘಟನೆ ಉದಯವಾಗಿದೆ. ಪರಿಶಿಷ್ಟ ಸಮುದಾಯವರು ಸಹಕಾರ ಸಂಘಗಳಲ್ಲಿ ಷೇರು ಪಡೆದು ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸಹಕಾರ ಸಂಘಗಳು ಮೇಲ್ವರ್ಗದ ಹಿಡಿತದಲ್ಲಿವೆ. ಇವರು ಒಂದಲ್ಲ ಒಂದು ಕಾರಣ ನೀಡಿ, ನಿಮ್ಮ ಸದಸ್ಯತ್ವವನ್ನು ತೆಗೆಯುವ ಸನ್ನಿವೇಶಗಳು ಹೆಚ್ಚು. ಹೀಗಾಗಿ ಸಹಕಾರ ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿಮ್ಮೊಂದಿಗೆ ಸದಾ ನಾನಿರುತ್ತೇನೆ ಎಂದರು.

ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ದರಖಾಸ್ತು ಜಮೀನು ಪಡೆದುಕೊಂಡು ಉಳಮೆ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ, ಕಂದಾಯ ಹಾಗೂ ಕೃಷಿ ಇಲಾಖೆಗಳಲ್ಲಿ ಬಹಳ ತೊಂದರೆಯಾಗುತ್ತಿದೆ. ಜೊತೆಗೆ ಕಾಡು ಪ್ರಾಣಿಗಳ ಹಾವಳಿ ಇರುತ್ತದೆ. ಹೀಗಾಗಿ ನಿಮ್ಮೆಲ್ಲರ ಹೋರಾಟ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ನಮ್ಮ ಹಕ್ಕು ಪಡೆದುಕೊಳ್ಳುವ ದಿಕ್ಕಿನಲ್ಲಿ ಮುಂದುವರಿಬೇಕು. ರೈತರಿಗೆ ತೊಂದರೆಯಾದ ತಕ್ಷಣ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದರು.

ಸಮಾರಂಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಆರ್. ಬಾಲರಾಜ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ತಾಪಂ ಮಾಜಿ ಅಧ್ಯಕ್ಷ ಆರ್. ಮಹದೇವ್, ಗಡಿಮನೆ ಕಟ್ಟೆಮನೆ ಯಜಮಾನರಾದ ಶಿವಕುಮಾರ್, ರಂಗಸ್ವಾಮಿ, ಎಂ. ವೀರಣ್ಣ, ನಾಗರಾಜು, ಸಂಘದ ಗೌರವ ಅಧ್ಯಕ್ಷ ದಡದಹಳ್ಳಿ ಗೋವಿಂದರಾಜು, ಸಂಘದ ಅಧ್ಯಕ್ಷ ಸಿದ್ದಯ್ಯನಪುರ ಸೋಮಣ್ಣ, ಉಪಾಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ರುದ್ರೇಶ್ ಗುಂಡಣ್ಣ, ಕಾರ್ಯದರ್ಶಿ ಪಿ. ಮೂರ್ತಿ ದಡದಹಳ್ಳಿ, ಖಜಾಂಚಿ ಹೆಬ್ಬಸೂರು ಮಹೇಶ್, ಡಾ. ಶಿವಕುಮಾರ್, ಎಸ್. ಆಲೂರು ಮಲ್ಲಣ್ಣ, ಮೊದಾಲದವರು ಇದ್ದರು.

ಎಆರ್‌ಕೆ ಅವರಿಗೆ ಸಚಿವ ಸ್ಥಾನ ನೀಡಿ:ಸಭೆಯಲ್ಲಿ ಪಾಪು ಮಾತನಾಡಿ, ಕಳೆದ ೧೯ ವರ್ಷಗಳ ನಂತರ ದಲಿತ ನಾಯಕರಾದ ಬಿ.ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲು ಮಾಡಿ, ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಈ ಭಾಗದ ಜನರ ಸೇವೆ ಮಾಡುವ ಅವಕಾಶವನ್ನು ಸಿದ್ದರಾಮಯ್ಯ ಅವರು ಕಲ್ಪಿಸಲಿ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆ ಹಾಗೂ ಒಗ್ಗಟ್ಟಿನಿಂದ ಅನುಮೋದನೆಯನ್ನು ಮಾಡಿ, ಸಿಎಂ ಅವರಿಗೆ ಮನವಿ ಮಾಡಿಕೊಳ್ಳೋಣ ಎಂಬ ಉತ್ತರ ಸಭೀಕರ ಕಡೆಯಿಂದ ಜೋರಾಗಿ ಕೇಳಿ ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ