ಮರಿಯಮ್ಮನಹಳ್ಳಿ; ಪ್ರತಿಯೊಬ್ಬರು ಒಂದಲ್ಲ ಒಂದು ಪ್ರತಿಭೆಯುಳ್ಳವರಾಗಿರುತ್ತಾರೆ. ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭಾವಂತರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಹಿರಿಯ ವೈದ್ಯ ಡಾ.ಪಿ.ವಿಜಯ ವೆಂಕಟೇಶ್ ಹೇಳಿದರು.ಅವರು ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜವು ವಾಸವಿ ಜಯಂತಿ ಅಂಗವಾಗಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಪಿ.ವಿಜಯ ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಭಾವಂತರಿಗೆ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳು ಲಭ್ಯವಾಗಲಿದೆ. ಪ್ರತಿಭಾವಂತರಾಗಲು ಸತತ ಪ್ರಯತ್ನದಿಂದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ. ಈ ದೆಸೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಪ್ರಯತ್ನಿಸಬೇಕು. ಯಾವುದಕ್ಕೂ ನಿರುತ್ಸಾಹಕ್ಕೆ ಒಳಗಾಗಬಾರದು. ಉತ್ಸಾಹದಿಂದ ಮತ್ತು ಧೈರ್ಯವಾಗಿ ಸತತ ಪರಿಶ್ರಮದಿಂದ ಸಾಧನೆಯತ್ತ ಮುನ್ನಡೆಯಬೇಕು ಎಂದು ಅವರು ಹೇಳಿದರು.ಮರಿಯಮ್ಮನಹಳ್ಳಿಯಲ್ಲಿ ನನ್ನ ಸುದೀರ್ಘ 46 ವರ್ಷಗಳ ವೈದ್ಯಕೀಯ ಸೇವೆಗೆ ಇಲ್ಲಿನ ಜನರು ನನ್ನನ್ನು ಪೋಷಿಸಿ ಬೆಳೆಸಿದ್ದಾರೆ. ಇಲ್ಲಿನ ಜನ ಅತ್ಯಂತ ಮುಗ್ಧರು, ಮಾತೃ ಹೃದಯಿಗಳು ಇಂತಹ ಊರಿನಲ್ಲಿ 46 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಹೆಮ್ಮೆ ನನಗಿದೆ ಎಂದರು.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ, ಜೆಇಇ ಮೇನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜೆ.ಹರ್ಷಿಣಿ, ಸಿಎದಲ್ಲಿ ಒಂದೇ ಬಾರಿಗೆ ಉತ್ತೀರ್ಣರಾದ ಕೆ.ಆರ್ಯ ಅವರನ್ನು ಸನ್ಮಾನಿಸಲಾಯಿತು.ಆರ್ಯವೈಶ್ಯ ಸಂಘದ ಅಧ್ಯಕ್ಷ ಚಿದ್ರಿ ಸತೀಶ್, ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಜಿ.ಜಯಲಕ್ಷ್ಮಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಹರಿಪ್ರಸಾದ್, ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡರಾದ ಎಂ.ವಿಶ್ವನಾಥ ಶೆಟ್ಟಿ, ಜಿ.ಸತ್ಯನಾರಾಯಣ ಶೆಟ್ಟಿ, ರಾಮಮೂರ್ತಿ ಶೆಟ್ಟಿ, ಡಿ.ರಾಘವೇಂದ್ರ ಶೆಟ್ಟಿ, ಡಿ.ಶ್ರೀನಿವಾಸ ಶೆಟ್ಟಿ, ಎನ್.ಶ್ರೀನಿವಾಸ ಶೆಟ್ಟಿ, ಇ.ನರಸಿಂಹರಾವ್, ಎಂ.ಪ್ರಕಾಶ್ ಶೆಟ್ಟಿ, ಜಿ.ಕೆ. ವೆಂಕಟೇಶ್ ಶೆಟ್ಟಿ, ಗೋಪಾಲ ಕೃಷ್ಣ ಸೇರಿದಂತೆ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ವಾಸವಿ ಮಹಿಳಾ ಸಮಾಜದ ಪದಾಧಿಕಾರಿಗಳು ಹಾಗೂ ಆರ್ಯವೈಶ್ಯ ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.