ಕನ್ನಡಪ್ರಭ ವಾರ್ತೆ ಕಲಬುರಗಿ
ಒಬ್ಬ ಶಹಜಾದಿ (ಯುವರಾಜ) ಯಿಂದ ಕಲಬುರಗಿ ಬರಬಾದಿ ಆಗುತ್ತಿದೆ. ಇಂಥವರಿಂದ ಆಜಾದಿ (ಸ್ವಾತಂತ್ರ್ಯ) ಗಾಗಿ ಹೋರಾಟ ನಡೆಸಿದರೆ, ಅವರು ತಮ್ಮ ಮೈಮೇಲೆ ಹಲ್ಲಿ ಬಿದ್ದವರಂತೆ ಆಡುತ್ತಿದ್ದಾರೆಂದು ಶ್ರೀಗಳು ಮಾತಿನಲ್ಲೇ ಸಚಿವರಿಗೆ ಕುಟುಕಿದ್ದಾರೆ.
ಒಬ್ಬ ಮಂತ್ರಿ ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತಾಡಬೇಕು ಎಂಬುದನ್ನೇ ಮರೆತು ಅಸಂವಿಧಾನಿಕ ಭಾಷೆ ಬಳಸಿ ತೋಳು ಏರಿಸಿ ಬೆದರಿಕೆ ಹಾಕುವುದು ಅದೆಷ್ಟು ಸರಿ? ಅದೆಷ್ಟು ಸಮಂಜಸವಾದದ್ದು ಇವರ ವರ್ತನೆ, ಧೋರಣೆ? ಇದು ಸಂವಿಧಾನ ಭಕ್ತರ ಲಕ್ಷಣವಲ್ಲ ಎಂದು ಶ್ರೀಗಳು ಹೇಳಿಕೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ತಿವಿದಿದ್ದಾರೆ.ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆ ನಾಡು ಆಳುವ ದೊರೆಗಳೇ ಕಾರಣ .ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿ ಹೆಣಗಾಡುತ್ತಿರುವ ಸರಕಾರ ಪ್ರಜೆಗಳ ರಕ್ಷಣೆ ಮರೆತು ಬಿಟ್ಟ ಪರಿಣಾಮ. ರಾಜ್ಯದಲ್ಲಿ ಕೊಲೆ ಸುಲಿಗೆ ಅತ್ಯಾಚಾರದಂತ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ ಎಂದು ರಾಮಸೇನೆಯ ಮುಖಂಡರೂ ಆಗಿರುವ ಆಂದೋಲಾ ಶ್ರೀಗಳು ರಾಜ್ಯ ಸರಕಾರವನ್ನು, ಅದರ ಆಡಳಿತದ ನಿಷ್ಕ್ರೀಯತೆಯನ್ನೂ ದೂಷಿಸಿದ್ದಾರೆ.
ಇಂತಹ ಘೋರಾತೀಘೋರ ಕೃತ್ಯಗಳು ನಡೆದ್ದಾಗಿಯೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ರೇಸಾರ್ಟ ಕ್ರೀಕೇಟ್ ಎಂದು ಎಂಜಾಯ್ ಮಾಡುತ್ತಿದ್ದಾರೆ. ನೇಹಾ ಅಂಜಲಿ ಕೊಲೆಗಳಿಂದಾಗಿ ಯುವತಿಯರು ಮಹಿಳೆಯರು ಭಯದಿಂದ ಬದುಕು ಸಾಗಿಸುತ್ತಿದ್ದಾರೆ. ರಾಜ್ಯ ಸರಕಾರ ಮೊದಲು ಕುಸಿದ ಕಾನೂನು ಸುವ್ಯವಸ್ಥೆಯನ್ನ ಸರಿಪಡಿಸಲಿ ಎಂದು ಸಿದ್ದಲಿಂಗ ಶ್ರೀಗಳು ಆಗ್ರಹಿಸಿದ್ದಾರೆ.