ವಿದ್ಯಾವಂತರಾಗಿ ಜಾತಿ ವ್ಯವಸ್ಥೆಗೆಪ್ರೋತ್ಸಾಹ ವಿಷಾಧನೀಯ: ಸಿದ್ದು

KannadaprabhaNewsNetwork |  
Published : Aug 27, 2026, 02:15 AM IST
gandhi bhavan | Kannada Prabha

ಸಾರಾಂಶ

ನಗರದ ಗಾಂಧಿಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೂದ್ರ ಸೇವಾ ಸಂಘವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದ್ದು, ಅದು ನಿವಾರಣೆಯಾಗಲು ಹಲವು ವರ್ಷಗಳೇಬೇಕು. ಅದರ ನಡುವೆಯೇ ವಿದ್ಯಾವಂತರಾಗಿ ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವುದು ದುರಾದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಗಾಂಧಿಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೂದ್ರ ಸೇವಾ ಸಂಘ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಮನುವಾದಿಗಳು ಹಿಂದೆ ಉದ್ದೇಶಪೂರ್ವಕವಾಗಿ ಚಾತುವರ್ಣ ವ್ಯವಸ್ಥೆಯನ್ನು ಸೃಷ್ಟಿಸಿದರು. ಅದು ಈಗ ಜಾತಿ ವ್ಯವಸ್ಥೆಯಾಗಿ ಗಟ್ಟಿಯಾಗಿ ಬೇರೂರಿದೆ. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ ಶುರುವಾಯಿತು. ಶೂದ್ರರು ಅಕ್ಷರ ಸಂಸ್ಕೃತಿಯಿಂದ, ಅವಕಾಶಗಳಿಂದ ದೂರವುಳಿಯುವಂತಾಯಿತು. ಅದರ ನಿವಾರಣೆಗೆ ಎಲ್ಲರೂ ವೈಜ್ಞಾನಿಕ, ವೈಚಾರಿಕವಾಗಿ ಚಿಂತನೆಯನ್ನು ಮಾಡಬೇಕು. ಜಾತಿ ವ್ಯವಸ್ಥೆ ಹೋಗಬೇಕಾದರೆ ವಿದ್ಯಾವಂತರು ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು. ಆದರೆ, ವಿದ್ಯಾವಂತರಾಗಿ ಜಾತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ನಮ್ಮಲ್ಲಿನ ಭಿನ್ನಾಭಿಪ್ರಾಯದಿಂದಲೇ 600 ವರ್ಷ ಮೊಘಲರು, 200 ವರ್ಷ ಬ್ರಿಟೀಷರು ನಮ್ಮನ್ನಾಳಿದರು. ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮಾನತೆ ಸ್ಥಾಪಿಸಿದರೆ ಯಾರೂ ನಮ್ಮ ನಡವೆ ಒಡಕುಂಟು ಮಾಡಲು ಸಾಧ್ಯವಿಲ್ಲ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಗ್ಗಟ್ಟು ಮೂಡುವುದಕ್ಕೆ ಬಿಡದೆ, ಒಡಕು ಮೂಡಿಸುತ್ತಿವೆ. ಅವು ಹಿಂದೆಯೂ ಇತ್ತು, ಈಗಲೂ ಇದೆ ಹಾಗೂ ಮುಂದೆಯೂ ಬಹಳ ವರ್ಷಗಳ ಕಾಲ ಇರುತ್ತವೆ. ಜಾತಿ ವ್ಯವಸ್ಥೆ ನಿವಾರಣೆಗೆ ನಮ್ಮ ಪ್ರಯತ್ನವನ್ನು ಮಾತ್ರ ಬಿಡಬಾರದು ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಸದ್ಯಕ್ಕೆ ನಿವಾರಣೆಯಾಗುವುದಿಲ್ಲ. ಹಾಗೆ ನಿವಾರಣೆಯಾಗುವುದಿದ್ದರೆ ಬಸವಣ್ಣ ಹೇಳಿ 850 ವರ್ಷಗಳಾದ ಮೇಲೂ ಉಳಿಯುತ್ತಿರಲಿಲ್ಲ. ವಿದ್ಯಾವಂತರು ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವ ಬದಲು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾದ ಎರಡೂ ಅವಧಿಯಲ್ಲಿ ಹಲವು ಭಾಗ್ಯ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅವು ಅಸಮಾನತೆ ನಿವಾರಿಸುವ, ಸಮ ಸಮಾಜ ನಿರ್ಮಿಸುವ ಕಾರ್ಯಕ್ರಮಗಳು ಎಂದು ತಿಳಿಸಿದರು. ಶೂದ್ರ ಸೇವಾ ಸಂಘದ ಅಧ್ಯಕ್ಷ ರಾಮೇಗೌಡ, ಸಂಚಾಲಕ ಮುರುಳೀಧರ ಹಾಲಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೂ ಮಳೆ ಸುರಿಸಿ ಕ್ಯಾಪ್ಟನ್‌ ‘ಅಭಿಮನ್ಯು’ಗೆ ಬೀಳ್ಕೊಡುಗೆ
ಯುವ ಜನತೆ ಕಲೆ ಸಂಸ್ಕೃತಿಗೆ ಜೀವ ತುಂಬಬೇಕು: ನಟರಾಜ್‌