ರಾಮನಗರ: ಭಾರತೀಯ ಗ್ರಾಮೀಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಮೂಲ ಬೇರು ಜನಪದ ಕಲೆ. ಯುವ ಜನತೆ ಕಲೆ, ಸಂಸ್ಕೃತಿಗೆ ಜೀವ ತುಂಬಬೇಕೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಅಧ್ಯಕ್ಷ ಗಾಣಕಲ್‌ ನಟರಾಜ್ ಹೇಳಿದರು

ರಾಮನಗರ: ಭಾರತೀಯ ಗ್ರಾಮೀಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಮೂಲ ಬೇರು ಜನಪದ ಕಲೆ. ಯುವ ಜನತೆ ಕಲೆ, ಸಂಸ್ಕೃತಿಗೆ ಜೀವ ತುಂಬಬೇಕೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಅಧ್ಯಕ್ಷ ಗಾಣಕಲ್‌ ನಟರಾಜ್ ಹೇಳಿದರು.

ತಾಲೂಕಿನ ಗಾಣಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್‌ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ನಗಾರಿ ಬಾರಿಸಿ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಗ್ರಾಮೀಣ ಸೊಗಡಿನ ಪ್ರತೀಕ. ಹಿರಿಯರ ಜೀವನದ ಅವಿಭಾಜ್ಯ ಭಾಗ. ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಅನುಭವ, ಜೀವನ ಮೌಲ್ಯ ಹಾಗೂ ನೀತಿ ಸಂದೇಶಗಳನ್ನು ಕಥೆ, ಹಾಡು, ಗಾದೆ ಹಾಗೂ ಲಾವಣಿಗಳಿಂದ ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದರು. ಅಜ್ಜಿ ಊಟ ಮಾಡಿಸುವಾಗ ಹೇಳುತ್ತಿದ್ದ ಕಥೆಗಳು ಇಂದಿಗೂ ನೆನಪಿನಲ್ಲಿವೆ. ಇಂತಹ ಜಾನಪದ ಕಥೆ, ಹಾಡು ಹಾಗೂ ಪರಂಪರೆಗಳು ನಮ್ಮ ಬದುಕಿಗೆ ಮೌಲ್ಯಗಳನ್ನು ಕಲಿಸುತ್ತಿದ್ದವು. ಯುವಪೀಳಿಗೆ ಜಾನಪದ ಪರಂಪರೆಯನ್ನು ಅರಿತು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಉಪನ್ಯಾಸಕ ಡಾ. ನರಸಿಂಹಸ್ವಾಮಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಜಾನಪದ ಸಂಸ್ಕೃತಿಯನ್ನು ನಾವು ನಿಧಾನವಾಗಿ ಮರೆಯುತ್ತಿದ್ದೇವೆ. ಜಾನಪದ ಕೇವಲ ಮನರಂಜನೆಯಲ್ಲ, ಅದು ನಮ್ಮ ಮೂಲ ಸಂಸ್ಕೃತಿಯ ಬೇರು, ಬದುಕಿನ ಅನುಭವಗಳ ಭಂಡಾರ. ಯುವಜನತೆ ಜಾನಪದ ಕಲೆ, ಸಾಹಿತ್ಯ, ಹಾಡು, ಕಥೆ ಹಾಗೂ ಪರಂಪರೆಗಳನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.

ಟ್ರಸ್ಟ್‌ ಅಧ್ಯಕ್ಷ ರವಿರಾಜ್ ಮಾತನಾಡಿ, ಜನರ ಬಾಯಿಂದ ಬಾಯಿಗೆ ಹರಡಿಕೊಂಡು ಬಂದ ಪದಗಳು, ಕಥೆಗಳು, ಹಾಡುಗಳು ಹಾಗೂ ಆಚರಣೆಗಳು ಕಾಲಕ್ರಮೇಣ ಜಾನಪದವಾಗಿ ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿವೆ. ನಮ್ಮ ಪೂರ್ವಿಕರು ತಮ್ಮ ಜೀವನಾನುಭವಗಳನ್ನೇ ಕಥೆ, ಹಾಡು, ಲಾವಣಿ, ಗಾದೆ ಹಾಗೂ ನುಡಿಗಟ್ಟುಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವುಗಳಲ್ಲಿ ಜೀವನದ ಅನುಭವ, ನೀತಿ, ಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳು ಅಡಗಿವೆ. ಅಂತಹ ಅಮೂಲ್ಯ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಿದರು.

ಜಾನಪದ ಕಲಾವಿದರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಬಳಿಕ ಜನಪದ ಗೀತ ಗಾಯನವನ್ನು ಜಾನಪದ ಕಲಾವಿದ ಪ್ರತಾಪ್ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಮೇಶ್, ಕಸಾಪ ತಾ. ಅಧ್ಯಕ್ಷ ಬಿ.ಟಿ.ದಿನೇಶ್, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ಹೊಂಬೆಗೌಡ, ಟ್ರಸ್ಟ್‌ ಗೌರವಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಡಿ.ನಿತ್ಯಾನಂದ, ಬಸವರಾಜು, ಕಾರ್ಯದರ್ಶಿ ಜಗದೀಶ್, ಷಣ್ಮುಗ, ಸದಸ್ಯರಾದ ನಂಜುಂಡಿ ಬಾನಂದೂರು, ಪಾರ್ಥ, ಪ್ರದೀಪ್, ವೆಂಕಟೇಶ್, ಸುರೇಶ್, ದೊಡ್ಡಯ್ಯ, ಹೊಂಬಯ್ಯ ಮತ್ತಿತರರು ಉಪಸ್ಥಿತರಿದ್ದರು.

24ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಗಾಣಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ನಗಾರಿ ಬಾರಿಸಿ ಉದ್ಘಾಟಿಸಿದರು. ಉಪನ್ಯಾಸಕ ಡಾ. ನರಸಿಂಹಸ್ವಾಮಿ, ಟ್ರಸ್ಟ್‌ ಅಧ್ಯಕ್ಷ ರವಿರಾಜ್,ಮುಖ್ಯಶಿಕ್ಷಕ ರಮೇಶ್, ಕಸಾಪ ತಾ. ಅಧ್ಯಕ್ಷ ಬಿ.ಟಿ.ದಿನೇಶ್ ಇತರರಿದ್ದರು.