60 ವರ್ಷ ಆದ ಹಿನ್ನೆಲೆಯಲ್ಲಿ ನಿವೃತ್ತನಾದ ಕ್ಯಾಪ್ಟನ್ ‘ಅಭಿಮನ್ಯು’ಗೆ ಹೂ ಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು:
60 ವರ್ಷ ಆದ ಹಿನ್ನೆಲೆಯಲ್ಲಿ ನಿವೃತ್ತನಾದ ಕ್ಯಾಪ್ಟನ್ ‘ಅಭಿಮನ್ಯು’ಗೆ ಹೂ ಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅದ್ಧೂರಿಯಾಗಿ ನಡೆದ ಗಜಪಯಣದಲ್ಲಿ ಮಾಜಿ ಅಂಬಾರಿ ಆನೆ ಅಭಿಮನ್ಯುಗೆ ಈ ಬಾರಿಯ ದಸರಾ ಗಜಪಡೆಗೆ ಆಯ್ಕೆಯಾಗಿರುವ ಆನೆಗಳು ಸೊಂಡಲೆತ್ತಿ ವಂದಿಸುವ ಮೂಲಕ ಗೌರವ ಸಲ್ಲಿಸಿದವು.
ಮೈಸೂರು ದಸರಾ ಮಹೋತ್ಸವದಲ್ಲಿ 26 ವರ್ಷಗಳ ಕಾಲ ಪಾಲ್ಗೊಂಡಿದ್ದ ಅಭಿಮನ್ಯು, ಸತತ 6 ಬಾರಿ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತಿತ್ತು. ಪ್ರಸ್ತುತ ಅಭಿಮನ್ಯು ಆನೆಗೆ 60 ವರ್ಷ ಆಗಿರುವ ಕಾರಣ ಗಜಪಡೆಗೆ ಆಯ್ಕೆ ಮಾಡಿಲಿಲ್ಲ. ಕಳೆದ ದಸರಾ ಮುಗಿಸಿ ಆನೆ ಶಿಬಿರಕ್ಕೆ ತೆರಳಿದ್ದ ವೇಳೆ ಮರದ ದಿಮ್ಮಿ ಎತ್ತುವ ವೇಳೆ ದಂತ ಮುರಿದುಕೊಂಡಿತ್ತು.ಗಜಪಯಣ ಸಮಾರಂಭಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ಆನೆಗೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಸಿಂಗಾರ ಮಾಡಿಲಾಯಿತು. ಅಭಿಮನ್ಯುವಿನ ಮೈಮೇಲೆ ಶಂಖ, ಚಕ್ರ, ಗಂಡಭೇರುಂಡ, ಹೂವಿನ ಬಳ್ಳಿಗಳನ್ನು ಕಲಾವಿದರು ಬಿಡಿಸಿದರು. ಗಜಪಯಣ ಆರಂಭಕ್ಕೂ ಮುನ್ನ ಅಭಿಮನ್ಯು ಆನೆಗೆ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಕರೆ ತರಲಾಯಿತು. ದಾರಿಯ ಅಕ್ಕಪಕ್ಕದಲ್ಲಿ ದಸರಾಗೆ ಆಗಮಿಸುವ ಆನೆಗಳು ನಿಂತು ಅಭಿಮನ್ಯು ಆನೆಗೆ ವಂದಿಸಿ ಗೌರವ ಸಲ್ಲಿಸಿದವು. ಆನೆಗಳ ಮೇಲಿದ್ದ ಮಾವುತರು ಅಭಿಮನ್ಯು ಆನೆಯ ಮೇಲೆ ಪುಷ್ಪವೃಷ್ಟಿಗೈದರು. ಆ ಮೂಲಕ ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಲಾಯಿತು.ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ:
ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು.2026ರ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು. ಸುಮಾರು 2 ಕಿ.ಮೀ. ಗಜಪಯಣ ಬಳಿಕ ಲಾರಿಗಳಲ್ಲಿ ಹೊರಟ 9 ಆನೆಗಳು ಸಂಜೆಯ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ತಲುಪಿದವು. ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ ಮತ್ತು ಕಾವೇರಿ, ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ ಮತ್ತು ಲಕ್ಷ್ಮೀ, ಮತ್ತಿಗೋಡು ಆನೆ ಶಿಬಿರದಿಂದ ಏಕಲವ್ಯ ಮತ್ತು ಶ್ರೀಕಂಠ ಆನೆಗಳು ಗಜಪಯಣದಲ್ಲಿ ಪಾಲ್ಗೊಂಡಿದ್ದವು. ನಂತರ ಪ್ರತ್ಯೇಕ ಲಾರಿಗಳ ಮೂಲಕ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿದವು.ವಿಶೇಷ ಪೂಜೆ ಸಲ್ಲಿಕೆ: ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಬಳಿ ಸಾಂಪ್ರದಾಯಿಕವಾಗಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ನಡೆದ ಪೂಜೆ ವೇಳೆ ಆನೆಗಳ ಪಾದ ತೊಳೆದ ಅರ್ಚಕರು, ನಂತರ ಅವುಗಳಿಗೆ ದೃಷ್ಟಿದೋಷ ತೆಗೆದರು. ಬಳಿಕ ಹಣೆ, ಪಾದಗಳಿಗೆ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಕಡುಬು, ಪಂಚ ಕಜ್ಜಾಯ, ಎಲೆ, ಅಡಿಕೆ, ಗಂಧ, ಪಂಚಫಲ, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು. ತದನಂತರ ಆನೆಗಳಿಗೆ ನವಧಾನ್ಯಗಳ ಪೂಜೆ ನೆರವೇರಿಸಿದರು.ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಗಜಪಯಣಕ್ಕೆ ಬೆಳಗ್ಗೆ 10 ರಿಂದ 10.28ರೊಳಗಿನ ತುಲಾ ಲಗ್ನದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಮಾವುತರ ಸೂಚನೆಯಂತೆ ಸೊಂಡಿಲೆತ್ತಿ ನಮಿಸಿದ ಆನೆಗಳು ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು.ಇದೇ ವೇಳೆ ವೀರಗಾಸೆ, ಪೂಜಾ ಕುಣಿತ, ಡೊಳ್ಳು, ನಗಾರಿ, ಚಂಡೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಾಕಾರಗಳು ಮೇಳೈಸಿದವು. ಮುತ್ತೈದೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಮಂಗಳವಾದ್ಯಗಳೊಂದಿಗೆ ಗಜಪಯಣ ಆರಂಭವಾಯಿತು.ನಾಳೆ ಗಜಪಡೆ ಅರಮನೆ ಪ್ರವೇಶ:ಕಾಡಿನಿಂದ ನಾಡಿಗೆ ಆಗಮಿಸಿರುವ 9 ಆನೆಗಳು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಆ.28ರಂದು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಂತರ ಅರಮನೆ ಆವರಣದಲ್ಲಿ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ಆರಂಭಿಸಲಿವೆ.