ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಒಳನುಗ್ಗುತ್ತಿರುವುದು ವಿಷಾದನೀಯ: ಶಿವರಾಮ ಹೆಬ್ಬಾರ

KannadaprabhaNewsNetwork |  
Published : Apr 08, 2026, 03:15 AM IST
ಸಮಾರಂಭದಲ್ಲಿ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ಮಾತನಾಡಿದರು. | Kannada Prabha

ಸಾರಾಂಶ

ಸಹಕಾರಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಒಳನುಗ್ಗುತ್ತಿರುವುದು ವಿಷಾದನೀಯ.

ಬಕ್ಕಳದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಮೃತ ಮಹೋತ್ಸವ

ಕನ್ನಡಪ್ರಭ ವಾರ್ತೆ ಶಿರಸಿ

ಸಹಕಾರಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಒಳನುಗ್ಗುತ್ತಿರುವುದು ವಿಷಾದನೀಯ ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.ಮಂಗಳವಾರ ತಾಲೂಕಿನ ಬಕ್ಕಳದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಮೃತ ಮಹೋತ್ಸವದ ಸಮಾರಂಭದಲ್ಲಿ ಮಾಜಿ ಅಧ್ಯಕ್ಷರಿಗೆ, ಮಾಜಿ ನಿರ್ದೇಶಕರಿಗೆ ಹಾಗೂ ನಿವೃತ್ತ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಿ ಮಾತನಾಡಿದರು.ಉತ್ತರಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಅತ್ಯಂತ ಶಕ್ತಿಯುತವಾಗಿರಲು ದಿಗ್ಗಜರು ಹಾಗೂ ರೈತರು ಕಾರಣ. ಸಹಕಾರಿ ಹಾಗೂ ರೈತರು ಒಂದು ನಾಣ್ಯದ ಎರಡು ಮುಖ. ಸೇವಾ ಸಹಕಾರಿ ಹಾಗೂ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೊಂಡಿಯಾಗಿ ಕೆಲಸ ನಿರ್ವಹಿಸಿ, ತಮ್ಮ ಆಶೋತ್ತರ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. 136 ವರ್ಷದ ಹಿಂದೆ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಜನ್ಮ ತಾಳಿತು. ಸಹಕಾರಿ ವ್ಯವಸ್ಥೆ ಜನ್ಮ ತಾಳಿದ ಜಿಲ್ಲೆಗಳಲ್ಲಿ ದುರ್ಭಲಗೊಂಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಕ್ಷೇತ್ರ ಇನ್ನೂ ಬಲಯುತವಾಗಿರಲು ಸಹಕಾರಿ ದಿಗ್ಗಜರ ನಿಸ್ವಾರ್ಥ ಸೇವಾ ಮನೋಭಾವನೆ ಕಾರಣ. ₹300 ಅಡಕೆ ದರ ಇದ್ದಾಗ ಧೃತಿಗಡದೇ, ಕಡವೆ ಶ್ರೀಪಾದ ಹೆಗಡೆ ಸಂಸ್ಥೆ ಕಟ್ಟಿ ಬೆಳೆಸಿದ ಪರಿಣಾಮ ರೈತರು ಈಗ ನೆಮ್ಮದಿಯಲ್ಲಿದ್ದಾರೆ. ಕಠಿಣ ಸವಾಲು, ಸಂಪರ್ಕ, ಸಾಗಾಣಿಕೆ ವ್ಯವಸ್ಥೆ ಇಲ್ಲದ ಕಾಲದಲ್ಲಿಯೂ ಸಹಕಾರಿ ಸಂಘವನ್ನು ಕಟ್ಟಿದ್ದಾರೆ. ಅವರ ಆದರ್ಶ ನಮಗೆಲ್ಲರಿಗೂ ದಾರಿದೀಪ ಎಂದರು.ಉತ್ತರಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರ ಬೆನ್ನೆಲುಬು.‌ ರಾಜ್ಯದಲ್ಲಿ ಎಳೆಂಟು ಜಿಲ್ಲೆಯಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಜೀವಂತವಾಗಿದೆ. ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್‌ 1850ಕ್ಕೂ ಅಧಿಕ ಕೋಟಿ ರೂ. ರೈತರಿಗೆ ಬೆಳೆ ಸಾಲದ ಜತೆ 600 ಕೋಟಿ ರೂ. ಮಧ್ಯಮಾವಧಿ ಸಾಲ ನೀಡಲಾಗಿದ್ದು, ಬ್ಯಾಂಕ್‌ನ 106 ವರ್ಷದ ಸುದೀರ್ಘ ಇತಿಹಾಸದಲ್ಲಿಯೂ ಠೇವಣಿದಾರರ, ಗ್ರಾಹಕರ, ರೈತರ, ಸಹಕಾರಿ ಸಂಘಗಳ ಸಹಾಯದಿಂದ ಪ್ರತಿ ವರ್ಷವೂ ಲಾಭ ಗಳಿಸುತ್ತ ಬಂದಿದೆ ಎಂದು ಹೇಳಿದರು.ಸಹಕಾರಿ ರತ್ನ ಪ್ರಶಸ್ತಿ ಪುಸಸ್ಕೃತ ಹಾಗೂ ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಶಿರಸಿ ಟಿಎಸ್‌ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಹಕಾರಿ ಅಧ್ಯಕ್ಷ ಗಣಪತಿ ನರಸಿಂಹ ಹೆಗಡೆ ನಕ್ಷೆ, ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಎಂ.ಎ. ಹೆಗಡೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ ಮತ್ತಿತರರು ಇದ್ದರು.

ಯುವಕರು ಸಹಕಾರಿ ಕ್ಷೇತ್ರದತ್ತ ಆಸಕ್ತಿ ವಹಿಸಲಿ

ಯಾವುದೇ ರಾಜಕೀಯ ಪಕ್ಷ ಭ್ರಷ್ಟಾಚಾರ ರಹಿತವಾಗಿಲ್ಲ. ಎಲ್ಲ ರಾಜಕಾರಣಿಗಳು ಅಧಿಕಾರಕ್ಕಾಗಿ ಆಸೆ ಪಡುತ್ತಾನೆ. ಆದರೆ ಬುದ್ಧಿಜೀವಿ ಒಳ್ಳೆಯ ಕಾಲಘಟ್ಟವನ್ನು ಕಾಣುತ್ತಾನೆ. ಸಹಕಾರಿ ಕ್ಷೇತ್ರದಲ್ಲಿ ಪಾವಿತ್ರ್ಯತೆ ಕಾಪಾಡಿದಾಗ ರೈತರಿಗೆ ಶಕ್ತಿ ನೀಡಲು ಸಾಧ್ಯವಾಗುತ್ತದೆ. ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಯುವಕರು ಸಹಕಾರಿ ಕ್ಷೇತ್ರದತ್ತ ಆಸಕ್ತಿ ವಹಿಸಬೇಕು. ಕಾರ್ಮಿಕರು, ಉದ್ಯೋಗಸ್ಥರು, ರೈತ, ಶ್ರಮಿಕರು ಕೆಡಿಸಿಸಿ ಬ್ಯಾಂಕ್ ಬೆಳೆಸಿದ್ದಾರೆ. ಲಾಭ-ನಷ್ಟವನ್ನು ಯೋಚಿಸದೇ ಅವರ ಸಹಾಯಕ್ಕೆ ನಿಲ್ಲುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಗಡಿಯಲ್ಲಿ ಸಂಭ್ರಮದ ಶೇಷಾಚಲ ಸದ್ಗುರುಗಳ ರಥೋತ್ಸವ
ರಾಜ್ಯಪಾಲರ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ